ಭಾರತದ ಸಂವಿಧಾನ ನಮ್ಮ ಸಂಸ್ಕೃತಿಯ ಸಾರವಾದ ವಸುದೈವ ಕುಟುಂಬಕಂ ಭಾವನೆಯ ದ್ಯೋತಕವಾಗಿದೆ. ಸಂವಿಧಾನ ರಚನಾ ಸಮಿತಿಯು ಜನ ಸಮುದಾಯದ ಬದುಕಿನ ಎಲ್ಲ ಸಂಗತಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಅದಕ್ಕೆಅಂತಿಮ ಸ್ವರೂಪ ನೀಡಿದ್ದಾರೆ.
ಧಾರವಾಡ:
ಭಾರತದ ಸಂವಿಧಾನ ನಮ್ಮ ಸಂಸ್ಕೃತಿಯ ಸಾರವಾದ ವಸುದೈವ ಕುಟುಂಬಕಂ ಭಾವನೆಯ ದ್ಯೋತಕವಾಗಿದೆ. ಸಂವಿಧಾನ ರಚನಾ ಸಮಿತಿಯು ಜನ ಸಮುದಾಯದ ಬದುಕಿನ ಎಲ್ಲ ಸಂಗತಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಅದಕ್ಕೆಅಂತಿಮ ಸ್ವರೂಪ ನೀಡಿದ್ದಾರೆ ಎಂದು ಸಾಹಿತಿ ಡಾ. ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ. ಸಂತೋಷ ಹಾನಗಲ್ ಅವರು ರಚಿಸಿದ ‘ಸಂವಿಧಾನ ನುಡಿ ಸಂಹಿತೆ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿಬಿಂಬಿಸುವ ಕೃತಿಯಾಗಿದೆ. ಸಂವಿಧಾನ ರಚಿಸುವ ವೇಳೆ ಭಾಷೆ ಕುರಿತಾದ ಹೇಳಿಕೆಗಳು ದೇಶದ ಏಕತೆ ಹಾಗೂ ಸಮಗ್ರತೆಯನ್ನು ಗೌರವಿಸುತ್ತವೆ. ಭಾಷಾ ವಿಷಯದಲ್ಲಿ ಸಂವಿಧಾನ ರಚನಾ ಸಮಿತಿಯು ಬಹಳ ಜಾಗೃತಿಯಿಂದ ಎಲ್ಲಿಯೂ ಸಮಸ್ಯೆ ಸೃಷ್ಟಿಯಾಗದಂತೆ ರಚಿಸಿದ್ದಾರೆ ಎಂದರು.ಕೃತಿ ಪರಿಚಯಿಸಿದ ಡಾ. ಪ್ರಜ್ಞಾ ಮತ್ತಿಹಳ್ಳಿ, ಭಾರತದ ಸಂವಿಧಾನವು ಒಂದು ಸಮಗ್ರ ದಾಖಲೆಯಾಗಿದೆ. ನಮ್ಮ ಸಂವಿಧಾನ ಮುತ್ಸದ್ಧಿಗಳು ಸಂವಿಧಾನ ರಚಿಸುವಾಗ ಎಲ್ಲಿಯೂ ಭಾಷೆಗೆ ಸಂಬಂಧಿಸಿದ ಗೊಂದಲ ಸೃಷ್ಟಿಗೆ ಅವಕಾಶ ನೀಡಿಲ್ಲ. ಈ ಕೃತಿ ಸಮಷ್ಠಿ ಪ್ರಜ್ಞೆಯಿಂದ ರಚಿತವಾಗಿದೆ. ವಿವಿಧತೆಯಲ್ಲಿ ಏಕತೆ ತಂದು ಸೌಹಾರ್ದಯುತವಾದ ಜೀವನ ನಡೆಸುವಂತೆ ಚರ್ಚೆ ಮಾಡಿಯೇ ಸಂವಿಧಾನ ರಚಿಸಿದ್ದಾರೆ. ಡಾ. ಸಂತೋಷ ಹಾನಗಲ್ ಅವರ ಈ ಕೃತಿ ಮುಂದಿನ ತಲೆಮಾರಿನವರಿಗೆ ಅಮೂಲ್ಯವಾದುದಾಗಿದೆ ಎಂದರು.
ಕೃತಿ ಲೇಖಕರಾದ ಡಾ. ಸಂತೋಷ ಹಾನಗಲ್ ಪ್ರಾಸ್ತಾವಿಕ ಮಾತನಾಡಿ, ನನ್ನ ಈ ಕೃತಿ ಜನ ಸಾಮಾನ್ಯರ ಬದುಕಿನ ಆಧಾರವಾಗಿದೆ. ಭಾಷೆ ಸವಾಲುಗಳು ಹಿಂದಿಗಿಂತಲೂ ಇಂದು ಮುನ್ನೆಲೆಯಲ್ಲಿವೆ. ಈ ಕೃತಿ ನೀತಿ-ನಿರ್ಧಾರಕರಿಗೆ, ಸಂಶೋಧಕರಿಗೆ ಖಂಡಿತಾ ಉಪಯುಕ್ತವಾಗಲಿದೆ ಎಂದು ಹೇಳಿದರು.ಪ್ರಾಧ್ಯಾಪಕರಾದ ಡಾ. ಸಣ್ಣವೀರಣ್ಣ ದೊಡಮನಿ ಅವರು, ಹಾನಗಲ್ ಓರ್ವ ಸೃಜನಶೀಲ ಬರಹಗಾರರು. ಅತ್ಯುತ್ತಮ ಸಂಶೋಧಕರಲ್ಲೊಬ್ಬರು. ಅವರ ಸಂವಿಧಾನ ನುಡಿ ಸಂಹಿತೆ ಮನೋಜ್ಞವಾಗಿ ರಚನೆಯಾಗಿದೆ ಎಂದು ಹೇಳಿ ಕವನ ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಡಾ. ಲೋಹಿತ ನಾಯ್ಕರ ಮಾತನಾಡಿ, ಜಗತ್ತಿನಲ್ಲಿ ಯುದ್ಧ ನಡೆದದ್ದೇ ಭಾಷೆಗಾಗಿ. ಭಾಷೆಯಲ್ಲಿ ಪ್ರಖರತೆ ಬಹಳ. ಅದು ಬೆಂಕಿ ಇದ್ದಂತೆ. ಎಲ್ಲರಿಗೂ ಅವರವರ ಮಾತೃಭಾಷೆ ಮುಖ್ಯವಾಗಿರುತ್ತದೆ. ಭಾಷೆಗೆ ಸಂಬಂಧಿಸಿದಂತೆ ಏಕತೆ ತರುವುದು ಅಂದಿನ ದಿನ ಬಹಳ ಕಷ್ಟದ ಕೆಲಸವಾಗಿತ್ತು ಎಂದು ಹೇಳಿದರು.ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ, ಸಿ.ಕೆ. ನಾವದಗಿ, ಶ್ರೀಕಾಂತ ದಳವಾಯಿ, ಎಸ್.ಜಿ. ಪಾಟೀಲ ಸೇರಿದಂತೆ ಮುಂತಾದವರಿದ್ದರು.