26ಕ್ಕೆ ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕಾ ಸಮಾವೇಶ

| Published : Apr 19 2025, 12:36 AM IST

ಸಾರಾಂಶ

ದಾವಣಗೆರೆಯಲ್ಲಿ ನಡೆಯಲಿರು ಸಂವಿಧಾನ ಉಳಿಸಿ ಸಮಾವೇಶ ಕುರಿತು ಕೆ.ಎಲ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಘಟಕ ಕೆ.ಎಲ್.ಅಶೋಕ್ ಮಾಹಿತಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಏ.26ರಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಯಲಿದೆ ಎಂದು ಸಂಘಟಕ ಕೆ.ಎಲ್.ಅಶೋಕ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ 10 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ನಟ ಪ್ರಕಾಶ್‍ರಾಜ್, ಹೋರಾಟಗಾರ್ತಿ ಮೇಧ ಪಾಟ್ಕರ್, ಗುಜರಾತ್ ಶಾಸಕ ಹಾಗೂ ಹೋರಾಟಗಾರ ಜಿಗ್ನೇಶ್‍ ಮೇವಾನಿ ಇನ್ನೂ ಅನೇಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ, ಕೇಂದ್ರದಲ್ಲಿ ನಾವುಗಳು ಅಧಿಕಾರಕ್ಕೆ ಬಂದಿರುವುದೆ ಸಂವಿಧಾನ ಬದಲಾವಣೆ ಮಾಡಲು ಎಂದು ಬಿಜೆಪಿ ನಾಯಕರು ಹೇಳುತ್ತಿರುವುದನ್ನು ಗಮನಿಸಿದರೆ ಒಂದಲ್ಲ ಒಂದು ದಿನ ಸಂವಿಧಾನಕ್ಕೆ ಅಪಾಯ ಗ್ಯಾರಂಟಿ.

ಈ ನಿಟ್ಟಿನಲ್ಲಿ ಜನತೆಯನ್ನು ಎಚ್ಚರಿಸುವುದಕ್ಕಾಗಿ ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಸಲಾಗುವುದು. ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾದರೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಶೋಷಿತ ಸಮುದಾಯಗಳು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಸಂವಿಧಾನ ಬದಲಾವಣೆ ಮಾಡುವುದು ಸರಿಯಲ್ಲ ಎಂಬುದು ನಮ್ಮ ವಾದ ಎಂದರು.

ನ್ಯಾಯವಾದಿ ಚಂದ್ರಪ್ಪ ಮಾತನಾಡಿ, ಆಯಾ ಕಾಲಕ್ಕನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವುದು ತಪ್ಪಲ್ಲ. ಆದರೆ ಸಂವಿಧಾನದ ಬುಡವನ್ನೇ ಅಲುಗಾಡಿಸುವುದು ಯಾವ ನ್ಯಾಯ? ತಿದ್ದುಪಡಿಗೂ ಬದಲಾವಣೆಗೂ ವ್ಯತ್ಯಾಸವಿದೆ ಎನ್ನುವ ಅರಿವನ್ನು ಜನತೆಯಲ್ಲಿ ಮೂಡಿಸುವುದಕ್ಕಾಗಿ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ವೇಳೆ ನಿವೃತ್ತ ಪ್ರಾಚಾರ್ಯ ಶಿವಕುಮಾರ್, ಜನಶಕ್ತಿಯ ಟಿ.ಶಫಿವುಲ್ಲಾ, ಸಲೋಮನ್ ರಾಜ್‍ಕುಮಾರ್, ಸಿರಾಜ್, ಹನುಮಂತಪ್ಪ ಗೋನೂರು ಇದ್ದರು.