ಸಾರಾಂಶ
ಕಡೂರಿಗೆ ಆಗಮಿಸಿದ ಸಂವಿಧಾನ ಜಾಗೃತ ಜಾಥಾ ರಥಯಾತ್ರೆಗೆ ಸ್ವಾಗತ: ಮಾಲಾರ್ಪಣೆ
ಕನ್ನಡಪ್ರಭ ವಾರ್ತೆ, ಕಡೂರುಕೃಷಿ ಕುಟುಂಬದಿಂದ ಬಂದ ಸಾಮಾನ್ಯ ರೈತನ ಮಗನೊಬ್ಬ ಶಾಸಕನಾಗಬಹುದು ಎಂಬುದಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಕೊಡುಗೆ ಕಾರಣ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರಿಗೆ ಆಗಮಿಸಿದ ಸಂವಿಧಾನ ಜಾಗೃತ ಜಾಥಾ ರಥಯಾತ್ರೆಯನ್ನು ಕ್ಷೇತ್ರದ ಜನರ ಪರವಾಗಿ ಸ್ವಾಗತಿಸಿ, ಮರವಂಜಿ ವೃತ್ತದಲ್ಲಿ ವಿವಿಧ ಮುಖಂಡರೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಸತತ ಅಧ್ಯಯನದ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಸಮಾನತೆ ನೀಡುವ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಪ್ರಾತಃ ಸ್ಮರಣೀಯರಾಗಿದ್ದಾರೆ. ಇಂದು ಭಾರತ ವಿಶ್ವಮಾನ್ಯತೆ ಪಡೆಯಲು ಹಾಗು ಮಹಿಳೆಯರಿಗೂ ಸಮಾನ ಹಕ್ಕು ಸಿಗಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ. ಪ್ರಸ್ತುತ ಕಾಲಮಾನದಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿಸುವ ಶಕ್ತಿಗಳ ವಿಕೃತ ಮನಸ್ಸುಗಳ ಅನಪೇಕ್ಷಿತ ವಿದ್ಯಮಾನಗಳಿಂದ ಜನರಲ್ಲಿ ಮೂಡಿರುವ ಅಭಧ್ರತೆ ಭಾವನೆ ದೂರವಾಗಬೇಕು. ಇದರ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಬೇಕು. ಪ್ರಸ್ತುತ ನಮ್ಮ ನಾಯಕರು ಹಾಗು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯ ಸರ್ಕಾರ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಅಡಿಯಲ್ಲೇ ನಡೆಯುತ್ತಿದೆ ಎಂದರು.
ತರೀಕೆರೆ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ಮಾತನಾಡಿ, ನಮ್ಮ ದೇಶದ ಮೊದಲ ಕಾನೂನು ಸಚಿವರಾದ ಡಾ. ಬಿ.ಆರ್ ಅಂಬೇಡ್ಕರ್ ಪಂಚ ಮೌಲ್ಯಗಳಾದ ಸಮಾನತೆ, ಸಹೋದರತ್ವ, ಐಕ್ಯತೆ, ಭ್ರಾತೃತ್ವ, ಪ್ರೀತಿಯನ್ನು ಅಳವಡಿಸಿ ಕೊಳ್ಳಬೇಕು. ರಾಜ್ಯ ಸರಕಾರದ ಆದೇಶದಂತೆ ರಾಜ್ಯದ ಎಲ್ಲೆಡೆ ಈ ಜಾಗೃತಿ ರಥ ಯಾತ್ರೆ ಸಂಚರಿಸುತ್ತಿದೆ ಎಂದು ತಿಳಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ದೇಶಕ್ಕೆ ಅರ್ಪಿಸಿದ ಸಂವಿಧಾನವನ್ನು ಡಾ. ಅಂಬೇಡ್ಕರ್ ಬರೆಯದೇ ಹೋಗಿದ್ದರೆ ನಾವುಗಳು ರಾಜಕಾರಣ ಕ್ಷೇತ್ರದಲ್ಲಿ ಬೆಳೆಯತ್ತಿರಲಿಲ್ಲ. ಅವರ ಆಶಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್, ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿದೆ ಎಚ್.ಡಿ. ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ,ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ತೋಟದಮನೆ ಮೋಹನ್ , ಈರಳ್ಳಿ ರಮೇಶ್, ದಲಿತ ಸಂಘಟನೆಗಳ ಮುಖಂಡರಾದ ಶೂದ್ರಶ್ರೀನಿವಾಸ್, ರಾಘವೇಂದ್ರ, ಶ್ರೀಕಾಂತ್, ಡಿಎಸ್‌ಎಸ್ ಮೈಸೂರು ವಿಭಾಗೀಯ ರಾಜ್ಯ ಸಂಚಾಲಕ ಕೃಷ್ಣಪ್ಪ, ಜಗದೀಶ್, ಈಶ್ವರಪ್ಪ, ಹನುಮಂತಪ್ಪ, ಮಂಜುನಾಥ್, ಮೈಲಾರಪ್ಪ,ಪುರಸಭೆ ನೌಕರರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸಾರ್ವಜನಿಕರು ಹಾಜರಿದ್ದರು.18ಕೆಕೆಡಿಯು1. 1ಎ.ಕಡೂರು ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥ ಯಾತ್ರೆ ಮೆರವಣಿಗೆಯಲ್ಲಿ ಮರವಂಜಿ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶಾಸಕ ಕೆ ಎಸ್ ಆನಂದ್ ಮುಖಂಡರೊಂದಿಗೆ ಮಾಲಾರ್ಪಣೆ ಮಾಡಿದರು.