ಸಮಸಮಾಜ ನಿರ್ಮಾಣದಲ್ಲಿ ಸಂವಿಧಾನದ ಕೊಡುಗೆ ಅಪಾರ: ಭೀಮಸೇನ ಚಿಮ್ಮನಕಟ್ಟಿ

| Published : Feb 09 2024, 01:49 AM IST

ಸಾರಾಂಶ

ಗುಳೇದಗುಡ್ಡ: ಈ ದೇಶದ ಎಲ್ಲರ, ಅದರಲ್ಲಿಯೂ ತಳಸಮುದಾಯಗಳ, ಶೋಷಿತರ ಆಶಾಕಿರಣವಾಗಿದ್ದೆ. ಭಾರತದ ಸಂವಿಧಾನ, ಸಮಾನತೆ, ಶೋಷಿತರ ರಕ್ಷಣೆ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಪರಿಪಾಲನೆಯಲ್ಲಿ ಸಮಸಮಾಜದ ನಿರ್ಮಾಣದಲ್ಲಿ ಸಂವಿಧಾನದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಗುರುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಈ ದೇಶದ ಎಲ್ಲರ, ಅದರಲ್ಲಿಯೂ ತಳಸಮುದಾಯಗಳ, ಶೋಷಿತರ ಆಶಾಕಿರಣವಾಗಿದ್ದೆ. ಭಾರತದ ಸಂವಿಧಾನ, ಸಮಾನತೆ, ಶೋಷಿತರ ರಕ್ಷಣೆ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಪರಿಪಾಲನೆಯಲ್ಲಿ ಸಮಸಮಾಜದ ನಿರ್ಮಾಣದಲ್ಲಿ ಸಂವಿಧಾನದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಗುರುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವ, ಗಾಂಧಿ ಮತ್ತು ಅಂಬೇಡ್ಕರ್‌ ಈ ದೇಶದ ಶೋಷಿತರ, ಹಿಂದುಳಿದವರ ಸಮಾನತೆಗಾಗಿ ಹೋರಾಡಿದವರು. ಅಂಬೇಡ್ಕರ್ ಸಮಾನತೆಯ ತತ್ವದ ಮೇಲೆ ಸಂವಿಧಾನ ರಚಿಸದಿದ್ದರೆ ನಮ್ಮೆಲ್ಲರ ಬದುಕು ದುಸ್ತರವಾಗುತ್ತಿತ್ತು. ತಮಿಳುನಾಡಿನ ಕ್ರಾಂತಿಕಾರಿ ವಿಚಾರವಾದಿ ಪೆರಿಯಾರ್ ರಾಮಸ್ವಾಮಿಯವರ ಶೂದ್ರ ಹೆಸರಿನ ಒಗ್ಗಟ್ಟಿನ ಮಂತ್ರವೂ ಸಮಾನತೆ ಹುಟ್ಟುಹಾಕಿತು. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿಯೂ ಆಯಿತು. ಈ ಎಲ್ಲ ಮಹನೀಯರು ಸಮಾಜ ಕಟ್ಟಲು ತಮ್ಮ ಬದುಕನ್ನೇ ಮೀಸಲಿಟ್ಟರು. ಇವರಂಥ ಅನೇಕ ಮಹನಿಯರ ತ್ಯಾಗ, ಹೋರಾಟ, ಸಮಸಮಾಜದ ಪರಿಕಲ್ಪನೆ ನಮ್ಮ ಸಂವಿದಾನದ ರೂಪುಗೊಳ್ಳು ಸಾಧ್ಯವಾಗಿದೆ. ಅಂಬೇಡ್ಕರ್ ಅವರು ಈ ಸಮಾಜದಿಂದ ನೋವು, ಸಂಕಷ್ಟ ಅನುಭವಿಸದೆ ಇದ್ದಿದ್ದರೆ ಅವರು ಸಮಸಮಾಜ ಅಶಯದ ಸಂವಿಧಾನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇತ್ತಿಚೇಗೆ ಸಂವಿಧಾನ ಬದಲಿಸುವ, ಕಿತ್ತು ಹಾಕುವ, ಸುಟ್ಟು ಬಿಡುವ ಮಾತುಗಳು ಕೇಳಿ ಬರುತ್ತಿವೆ. ಇದೊಂದು ನೋವಿನ ಸಂಗತಿ. ಸಂವಿಧಾನ ಇಲ್ಲವಾದರೆ ನಮ್ಮೆಲ್ಲರ ಬದುಕೆ ಕತ್ತಲಮಯವಾಗುತ್ತದೆ. ಸಂವಿಧಾನ ಉಳಿಸೋಣ, ಗೌರವಿಸೋಣ, ಅದರ ಬೆಳಕಿನಲ್ಲಿ ನಡೆಯೋಣ ಎಂದರು.

ಉಪನ್ಯಾಸಕ ಎಂ.ಎಸ್.ಪಾಟೀಲ ಮಾತನಾಡಿ, ದೇಶದಲ್ಲಿ ಧರ್ಮಗ್ರಂಥಗಳು ಒಂದು ಭಾಗವಾದರೆ, ಸಂವಿಧಾನವೇ ಒಂದು ಭಾಗವಾಗಿ ನಿಲ್ಲುತ್ತದೆ. ಧರ್ಮಗ್ರಂಥ ಒಂದು ಸಮುದಾಯ, ಜನಾಂಗಕ್ಕೆ ಸೀಮಿತವಾದರೆ, ಸಂವಿಧಾನ ಈ ದೇಶದ ಎಲ್ಲರ ಆಶಾಕಿರಣವಾಗಿದೆ. ಸಂವಿಧಾನ ಬಗ್ಗೆ ಎಲ್ಲರಲ್ಲಿಯೂ ಅಪಾರವಾದ ಗೌರವ ಇದೆ. ಸಂವಿಧಾನ ಈ ನೆಲದ ಪ್ರತಿಯೊಬ್ಬರಲ್ಲಿಯೂ ಸಮತಾಭಾವ ಮೂಡಿಸುವ ಶಕ್ತಿಹೊಂದಿದೆ. ಸಂವಿಧಾನ ರಚನಾ ಸಂದರ್ಭದಲ್ಲಿ ಸಮಿತಿ ಮುಂದಿದ್ದ ಪ್ರಶ್ನೆಗಳು,ಚರ್ಚೆ ಗಳು ಯಾವ ರೀತಿಯಾಗಿ ಸಂವಿಧಾನವನ್ನು ರಚಿಸಲ್ಪಟ್ಟವು ಎಂಬುದರ ಬಗ್ಗೆ ಮಾರ್ಮಿಕವಾಗಿ ಹೇಳಿದರು.

ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ನಮ್ಮ ಸಂವಿಧಾನ ರಾಷ್ಟ್ರ ಧರ್ಮದ ಸಂಕೇತವಾಗಿದೆ. ಎಲ್ಲ ಧರ್ಮಗಳಿಗೂ ಮೀರಿದ ಧರ್ಮ ರಾಷ್ಟ್ರಧರ್ಮ ಅದನ್ನು ಗೌರವಿಸೋಣ. ಇಂದು ಸಂವಿದಾನದ ಅಶಯಗಳಿಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ಬಡವ ಮತ್ತಷ್ಟು ಬಡವನಾಗುತ್ತಿರುವ ಶ್ರೀಮಂತ ಮತ್ತಷ್ಟು ಶ್ರೀಮಂತನಾಗುತ್ತಿರುವ ಸಂದರ್ಭಗಳಿಂದ ದೇಶದ ಶಾಂತಿ, ಸುವ್ಯವಸ್ಥೆ, ಸಮಾನತೆಗೆ ಧಕ್ಕೆ ಬರುತ್ತಿದೆ ಎಂಬ ನೋವನ್ನು ವ್ಯಕ್ತಪಡಿಸಿದರು. ತಹಸೀಲ್ದಾರ ಮಂಗಳಾ ಎಂ. ಅವರು ಸಂವಿಧಾನದ ಆಶಯವನ್ನು ಮತ್ತು ಜಾಗೃತಿ ಜಾಥಾ ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ಹೇಳಿದರು. ಶಾಲಾ ಮಕ್ಕಳ ಡಾ.ಬಿ.ಆರ್.ಅಂಬೇಡ್ಕರ್, ಬುದ್ದ, ಗಾಂಧಿ, ವೇಷಭೂಷಣಗಳು ಸಭಿಕರ ಗಮನ ಸೆಳೆದವು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳಿಂದ ಸಂವಿಧಾನದ ಪ್ರಸ್ತಾವನೆ ಓದಿಸಲಾಯಿತು.

ಮಧ್ಯಾಹ್ನ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ತಾಲೂಕಿನ ವಿವಿಧ ಇಲಾಖೆಗಳ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ್, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಶಿವು ಹಿರೇಮಠ ಇದ್ದರು.