ಅಧಿಕಾರಕ್ಕಾಗಷ್ಟೆ ಕಾಂಗ್ರೆಸ್ಸಿಂದ ಸಂವಿಧಾನ ಬಳಕೆ: ಡಾ.ಧನಂಜಯ ಸರ್ಜಿ

| Published : Jul 31 2024, 01:01 AM IST

ಸಾರಾಂಶ

ಶಿಕಾರಿಪುರದಲ್ಲಿ ನಡೆದ ತಾಲೂಕು ಬಿಜೆಪಿಕಾರ್ಯಕಾರಣಿಗೆ ವಿ.ಪ. ಸದಸ್ಯ ಡಾ.ಧನಂಜಯ ಸರ್ಜಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕಾಂಗ್ರೆಸ್ ಪಕ್ಷ ಅಧಿಕಾರ ಉಳಿಸಿಕೊಳ್ಳಲು ಸಂವಿಧಾನವನ್ನು ಬಳಸಿಕೊಂಡಿದ್ದು, ಬಿಜೆಪಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ಸಂವಿಧಾನವನ್ನು ಉಪಯೋಗಿಸಿ ಕೊಳ್ಳುತ್ತಿದೆ ಎಂದು ವಿಪ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಒಳಾಂಗಣಭ ಆಡಿಟೋರಿಯಂನಲ್ಲಿ ಸೋಮವಾರ ನಡೆದ ತಾಲೂಕು ಬಿಜೆಪಿ ಕಾರ್ಯಕಾರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಸಂಘಟನೆ ಆಧಾರಿತ ಪಕ್ಷವಾಗಿದ್ದು, ಪಕ್ಷಕ್ಕೆ ಕಾರ್ಯಕರ್ತರು ಸದೃಢ ಶಕ್ತಿಯಾಗಿದ್ದಾರೆ ಎಂದ ಅವರು ಕಾರ್ಯಕರ್ತರ ಶ್ರಮ ಸಂಕಲ್ಪ ಶಕ್ತಿಯಿಂದಾಗಿ ಬಿಜೆಪಿ ಜಗತ್ತಿನಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 26 ಕೋಟಿ ಮತ ಗಳಿಸಿದ್ದು, ಕಾಂಗ್ರೆಸ್ ಪಕ್ಷ 13 ಕೋಟಿಗಷ್ಟೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ ಎಂದರು.

ಜಾತಿ ಧರ್ಮದ ಹೆಸರಿನಲ್ಲಿ ನೆಹರೂ ಕಾಲದಿಂದಲೂ ಒಡೆದಾಳುವ ನೀತಿ ಮೂಲಕ ಅಧಿಕಾರ ಗಳಿಸಿದ ಕಾಂಗ್ರೆಸ್ ಪಕ್ಷ, ಹಗೆತನದ ಬೀಜ ಬಿತ್ತಿ ಸುದೀರ್ಘ ಕಾಲ ದೇಶವನ್ನು ಆಳಿದೆ ಎಂದು ಹರಿಹಾಯ್ದರು.

ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ಹಿಂದುಳಿದವರ, ದಲಿತರ ಪರ ಎಂದು ಹೇಳಿಕೊಂಡು ದಲಿತರು, ಹಿಂದುಳಿದ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನೇ ತಮ್ಮ ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡು ದ್ರೋಹ ಬಗೆದಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ತಾ.ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ ಮುಖಂಡ ಎಚ್.ಟಿ ಬಳಿಗಾರ್, ರಾಮಾನಾಯ್ಕ, ನಿವೇದಿತಾ ರಾಜು, ಗಾಯತ್ರಿದೇವಿ, ಚನ್ನವೀರಪ್ಪ, ಬಿ.ಡಿ ಭೂಕಾಂತ್, ಶೇಖರಪ್ಪ, ವಸಂತಗೌಡ, ಹಾಲಪ್ಪ, ಮಹೇಶ್ ಹುಲ್ಮಾರ್, ವೀರೇಂದ್ರ, ರಾಘವೇಂದ್ರ ಎಸ್.ಎಸ್,ಮಿಲ್ಟ್ರಿ ಬಸವರಾಜ್ ಮತ್ತಿತರರು ಹಾಜರಿದ್ದರು.