ದೇಶಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ ಸಂವಿಧಾನ: ಜುಬಿನ್ ಮೊಹಾಪಾತ್ರ

| Published : Jan 27 2025, 12:45 AM IST

ದೇಶಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ ಸಂವಿಧಾನ: ಜುಬಿನ್ ಮೊಹಾಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪಥಸಂಚಲನದಲ್ಲಿ ಪುತ್ತೂರಿನ ಪೊಲೀಸ್ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ವಿವಿಧ ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್, ಆರ್ಮಿ, ಏರ್‌ವಿಂಗ್, ನೇವಿ ಘಟಕ, ಸ್ಕೌಟ್ಸ್ - ಗೈಡ್ಸ್ ಘಟಕಗಳು ಭಾಗವಹಿಸಿದ್ದವು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಸಂವಿಧಾನದ ಆಧಾರದಲ್ಲಿ ನಾವು ಈ ಮಟ್ಟದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಿದ್ದು, ಸಂವಿಧಾನದಿಂದಾಗಿ ದೇಶದಲ್ಲಿ ಸಾಮಾಜಿಕ ನ್ಯಾಯವಿದೆ. ಪ್ರಪಂಚದಲ್ಲಿಯೇ ದೊಡ್ಡ ಸಂವಿಧಾವಿರುವ ದೇಶ ನಮ್ಮದು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು. ಅವರು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸರ್ವ ಧರ್ಮದ ಶಾಂತಿಯ ತೋಟವಾಗಿರುವ ನಮ್ಮ ದೇಶದ ಪ್ರಜಾಪ್ರಭುತ್ವವು ಸಮಾನತೆ, ಶಾಂತಿ ಮತ್ತು ಸೌಹಾರ್ದತೆಯ ಮೇಲೆ ನಿಂತಿದೆ. ವರ್ಗ ಗುಂಪುಗಳ ಅಧೀನದಲ್ಲಿರದೆ ಜನರ ಅಧೀನದಲ್ಲಿ ಪ್ರಜಾಪ್ರಭುತ್ವವಿದೆ ಎಂದರು.ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮತ್ತು ವಿದ್ಯಾಮಾತ ಫೌಂಡೇಶನ್ ಮುಖ್ಯಸ್ಥ ಭಾಗ್ಯೇಶ್ ರೈ ಅವರನ್ನು ಶಾಸಕರು ಗೌರವಿಸಿದರು.ಪಥಸಂಚಲನದಲ್ಲಿ ಪುತ್ತೂರಿನ ಪೊಲೀಸ್ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ವಿವಿಧ ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್, ಆರ್ಮಿ, ಏರ್‌ವಿಂಗ್, ನೇವಿ ಘಟಕ, ಸ್ಕೌಟ್ಸ್ - ಗೈಡ್ಸ್ ಘಟಕಗಳು ಭಾಗವಹಿಸಿದ್ದವು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೌರಾಡಳಿತ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿವಿಧ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು. ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷ ಅರುಣ್ ನಾಗೇಗೌಡ, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮತ್ತಿತರರು ಇದ್ದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.