ಜಾತಿ ವ್ಯವಸ್ಥೆಯಿಂದ ಸಂವಿಧಾನದ ಆಶಯ ಈಡೇರಲ್ಲ

| Published : Jul 07 2024, 01:16 AM IST

ಸಾರಾಂಶ

ದೇಶದಲ್ಲಿ ಲಿಂಗ ತಾರತಮ್ಯ, ಜಾತಿ ವ್ಯವಸ್ಥೆ ಎಲ್ಲಿಯವರೆಗೆ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಅಂಬೇಡ್ಕರ್‌ ಕೊಟ್ಟಂತಹ ಸಂವಿಧಾನದ ಆಶಯಗಳು ಈಡೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದಲ್ಲಿ ಲಿಂಗ ತಾರತಮ್ಯ, ಜಾತಿ ವ್ಯವಸ್ಥೆ ಎಲ್ಲಿಯವರೆಗೆ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಅಂಬೇಡ್ಕರ್‌ ಕೊಟ್ಟಂತಹ ಸಂವಿಧಾನದ ಆಶಯಗಳು ಈಡೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಅಭಿಪ್ರಾಯಪಟ್ಟರು.

ಶನಿವಾರ ಅವರು, ಭವತಾರಿಣಿ ಪ್ರಕಾಶನ ವತಿಯಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಎಸ್‌.ಗುರುಮೂರ್ತಿ ಅವರ ಸಮಾಜವಾದದ ಹರಿಕಾರ, ಭಾರತ ರತ್ನ ‘ಕರ್ಪೂರಿ ಠಾಕೂರ್‌’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜವಾದಿ ಆಂದೋಲನ ಪ್ರಾರಂಭವಾಗಿದ್ದೇ ಜಾತಿವಿನಾಶಕ್ಕೆ. ಪ್ರಸ್ತುತ ಎಷ್ಟೇ ಸಾಕ್ಷಾರತಾ ಪ್ರಮಾಣ ಹೆಚ್ಚುತ್ತಿದ್ದರೂ, ವಿಜ್ಞಾನ ಮುಂದುವರೆಯುತ್ತಿದ್ದರೂ ಅಷ್ಟೇ ಜಾತಿಯ ಕಬಂಧಬಾಹು ನಮ್ಮನ್ನು ಕಟ್ಟಿಹಾಕುತ್ತಿದೆ. ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ ಇದು ಎಲ್ಲಿಯವರೆಗೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಈ ದೇಶದ ಬಡತನ ಹೋಗುವುದಿಲ್ಲ. ನೀವು ಎಷ್ಟೇ ಕಾರ್ಯಕ್ರಮಗಳನ್ನು ಮಾಡಿದರೂ ಅದು ಹೋಗುವುದಿಲ್ಲ. ಈ ವ್ಯವಸ್ಥೆಗಳನ್ನು ತೊಲಗಿಸುವಂತ ವೈಜ್ಞಾನಿಕವಾದ ಸರ್ಜರಿ ಆಗಬೇಕಿದೆ. ಆದ್ದರಿಂದ ಜಾತಿ ವಿನಾಶದ ಪರವಾಗಿ ಹೋರಾಟ ಮಾಡಿದ ಕರ್ಪೂರಿ ಠಾಕೂರ್‌ ಪ್ರಮುಖರಾಗಿ ಕಾಣುತ್ತಾರೆ ಎಂದರು.

ದೇಶ ಸಬಲವಾಗಿ ಇರಬೇಕೆಂದರೆ ಇಲ್ಲಿನ ಬಹುಜನರನ್ನು(ಶೋಷಿತರು, ದುರ್ಬಲ ವರ್ಗದವರು, ದಲಿತರು) ಪ್ರತಿನಿಧಿಸುವವರಿಗೆ ಅಧಿಕಾರದಲ್ಲಿ ಅಗ್ರಸ್ಥಾನ ಸಿಗಬೇಕು. ಯಾರು ಹಸಿವೆಯ ಬಾಣಲೆಯಲ್ಲಿ ಬೆಂದು ಕರಕಲಾಗಿದ್ದಾರೋ ಅವರಿಗೆ ಧ್ವನಿ ಬಂದಾಗ ಮಾತ್ರ ನಮ್ಮ ದೇಶ ನಿಜವಾಗಿ ಸಬಲ ಆಗಲು ಸಾಧ್ಯ. ಇಲ್ಲದಿದ್ದರೆ ಅಸಮಾನತೆ ಬೆಳೆಯುತ್ತಲೇ ಇರುತ್ತದೆ. ಜಾತಿ ವಿನಾಶ, ಲಿಂಗ ತಾರತಮ್ಯದ ವಿನಾಶದಿಂದ ಮಾತ್ರ ಅಸಮಾನತೆ ತೊಗಲು ಸಾಧ್ಯ. ಇದು ಮೂಲಭೂತವಾದ ತತ್ವ. ರಾಜಕಾರಣಿಗಳು, ವಿದ್ವಾಂಸರು, ಆಡಳಿತಗಾರರು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಎಲ್ಲರೂ ಅನಕ್ಷರಸ್ಥರೆಂದೇ ಭಾವಿಸಬೇಕಾಗುತ್ತದೆ ಎಂದು ಹೇಳಿದರು. ಹಿಂದೂ ಸಮಾಜದಲ್ಲಿ ನಾವು ಹಿಂದುಗಳೆ, ಆದರೆ, ಎಲ್ಲೆಯವರೆಗೆ ಹಿಂದು ಸಮಾಜವನ್ನು ಜಾತಿ ವ್ಯವಸ್ಥೆ ಆವರಿಸಿಕೊಂಡಿರುತ್ತದೆ ಅ ಬತ್ತಳಿಕೆಯಿಂದ ಬಿಡುಗಡೆ ಆಗುವುದಿಲ್ಲ ಅಲ್ಲಿಯವರೆ ನಾನು ಹಿಂದು ಎಂದು ಕರೆದುಕೊಳ್ಳುವುದಿಲ್ಲ. ಹಿಂದು ಜಾತಿ ವ್ಯವಸ್ಥೆಯ ಚಿಹ್ನೆ ಅಲ್ಲ. ಜಾತಿ ವ್ಯವಸ್ಥೆ ನಿರ್ಮೂನೆಯ ವಿಚಾರ ಮುಂದಿಟ್ಟುಕೊಂಡು ಕರ್ಪೂರಿ ಠಾಕೂರ್‌ ಅವರು ಹೋರಾಟ ಮಾಡಿದರು. ಸಮಾಜವಾದಿ ಚಿಂತನೆಯ ಪ್ರತಿಯೊಬ್ಬರು ಅವರ ಸಿದ್ಧಾಂತದ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು. ಮುಖ್ಯಮಂತ್ರಿಯವರ ನೀತಿ ಮತ್ತು ಕಾರ್ಯಕ್ರಮ ಸಲಹೆಗಾರ, ಶಾಸಕ ಬಿ.ಆರ್‌.ಪಾಟೀಲ್‌ ಮಾತನಾಡಿ, ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬ ಸಿದ್ಧಾಂತವನ್ನು ಹುಟ್ಟು ಹಾಕಿದವರು ಸಮಾಜವಾದಿಗಳು. ಆದರೆ, ಸೌಮ್ಯವಾದಿಗಳು ಕಮ್ಹೂನಿಷ್ಟ್‌ ವಾದಿಗಳ ಮಾತಿಗೆ ಒಪ್ಪಲಿಲ್ಲ. ಜಾತಿ ವ್ಯವಸ್ಥೆ ಪ್ರಮುಖವಾದುದ್ದಲ್ಲ. ಆರ್ಥಿಕ ಸಮಾನತೆ ಬಂದರೆ ಎಲ್ಲ ಸರಿ ಹೋಗುತ್ತದೆ ಎಂದು ನಂಬಿದ್ದರು. ಜಾತಿ ವ್ಯವಸ್ಥೆಯ ಕರಾಳತೆ ಇವಾಗ ಅವರ ಅರಿವಿಗೆ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕಾನಾಥ್‌, ಲೇಖಕ ಎಸ್‌.ಕೆ.ಶೇಷಚಂದ್ರಿಕ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್‌.ಹನುಮಂತಯ್ಯ,ಸಮಾಜವಾದಿ ಲೇಖಕ ಮಂಗ್ಳೂರ ವಿಜಯ, ಬಿಹಾರದ ಮಾಜಿ ಸಚಿವ ಅಕಲಾಖ್‌ ಅಹ್ಮದ್‌, ಕೃತಿ ಲೇಖಕ ಡಾ.ಎಸ್‌.ಗುರುಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.