ಕಾಂಗ್ರೆಸ್ ಸರ್ಕಾರ ಜನರ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಧ್ವೇಷ ಭಾಷಣ ವಿಧೇಯಕ ಅಂಗೀಕರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಅವರು, ಅಂಬೇಡ್ಕರ್ ಅವರು ಸಂವಿಧಾನದತ್ತವಾಗಿ ನೀಡಿರುವ ಹಕ್ಕನ್ನು ಮೊಟಕುಗೊಳಿಸುವ ಯತ್ನಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ಸಾಮಾನ್ಯ ಜನರು, ಮಾಧ್ಯಮಗಳು, ವಿರೋಧ ಪಕ್ಷದ ಹಕ್ಕುಗಳನ್ನು ಕಿತ್ತುಕೊಳ್ಳುವ ಇಂತಹ ಕಾಯ್ದೆಗಳ ವಿರುದ್ಧ ಜನರು ಜಾಗೃತರಾಗಬೇಕು ಎಂದರು.ಇಂತಹ ಜನವಿರೋಧಿ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದೆಂದು ಪಕ್ಷದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ರಂಜನ್ ಹೇಳಿದರು.ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಈಗಾಗಲೇ ಸಾರ್ವಜನಿಕವಾಗಿ ದ್ವೇಷ ಹರಡುವ ಮಾತುಗಳಿಗೆ ಸಂವಿಧಾನದಡಿಯೇ ಕಾನೂನುಗಳಿವೆ. ಈಗಿನ ಭಾರತೀಯ ನ್ಯಾಯ ಸಂಹಿತೆಯಲ್ಲೂ ಕಾನೂನುಗಳಿವೆ. ಹೀಗಿದ್ದರೂ ಹೊಸದಾಗಿ ಕಾನೂನು ತರುವ ಅಗತ್ಯವೇನಿದೆ? ಈ ಬಗ್ಗೆ ನ್ಯಾಯಾಲಯದ ಮೂಲಕ ಹೋರಾಟ ಮಾಡಲಾಗುವುದು ಎಂದರು.ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಈ ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದವರು, ಪಾಕಿಸ್ತಾನ ಕ್ರಿಕೆಟ್ ಗೆದ್ದಾಗ ಸಂಭ್ರಮಿಸಿ ಪಟಾಕಿ ಹೊಡೆದವರು, ಮಂಗಳೂರಿನಲ್ಲಿ ಎಸ್‌ಡಿಪಿಐನವರ ಭಾಷಣ, ಕೋಗಿಲವಾಡಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕೂಗಿದ ಘೋಷಣೆ, ಭಾಷಣಗಳು ಈ ವಿಧೇಯಕಕ್ಕೆ ಒಳಪಡುತ್ತದೆಯೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದರು.ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಹರಪಳ್ಳಿ ರವೀಂದ್ರ, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಪ್ರಮುಖರಾದ ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಮೋಹಿತ್ ತಿಮ್ಮಯ್ಯ, ಎನ್.ಆರ್. ಅಜೀಶ್‌ಕುಮಾರ್, ಹೆಚ್.ಕೆ. ಮಾದಪ್ಪ, ಕವಿತಾ ವಿರೂಪಾಕ್ಷ ಸೇರಿದಂತೆ ಇತರರು ಇದ್ದರು.