ಸಾರಾಂಶ
ಗ್ರಾಮದ ಯುವಕ ಸಿಗೇನಹಳ್ಳಿ ಬಸವರಾಜ ಗ್ರಾಮದಲ್ಲಿ ನೂತನ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವಂತೆ ಕ್ರಿಯಾಯೋಜನೆ ರೂಪಿಸಿ
ಹಗರಿಬೊಮ್ಮನಹಳ್ಳಿ; ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಿ ಯೋಜನೆಯನ್ನು ಸಕಾರಗೊಳಿಸಲಾಗುವುದು ಎಂದು ಹಂಪಾಪಟ್ಟಣ ಗ್ರಾಪಂ ಅಧ್ಯಕ್ಷ ಬಲ್ಲಾಹುಣಿಸಿ ನಾಗರಾಜ ಹೇಳಿದರು.
ತಾಲೂಕಿನ ಹಂಪಾಪಟ್ಟಣ ಗ್ರಾಮದ ಹಳೇ ಗ್ರಾಪಂ ಕಚೇರಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.ಗ್ರಾಮದ ಯುವಕ ಸಿಗೇನಹಳ್ಳಿ ಬಸವರಾಜ ಗ್ರಾಮದಲ್ಲಿ ನೂತನ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವಂತೆ ಕ್ರಿಯಾಯೋಜನೆ ರೂಪಿಸಿ, ಈಗಿರುವ ಆಸ್ಪತ್ರೆ ಕಿರಿದಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆಸ್ಪತ್ರೆಗೆ ಕೂಡಲೇ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು.ಜೊತೆಗೆ ಬಸ್ ನಿಲ್ದಾಣವನ್ನು ಶುಚಿಯಾಗಿಡಬೇಕು. ಗ್ರಾಮದ ಅಲ್ಲಲ್ಲಿ ದನಕರುಗಳಿಗೆ ಕುಡಿಯುವ ನೀರಿಗಾಗಿ ತೊಟ್ಟಿಗಳನ್ನು ನಿರ್ಮಿಸಿ ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳ ಗಮನಕ್ಕೆ ತಂದು ಹಂತ ಹಂತವಾಗಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಪಿಡಿಒ ರತ್ನಮ್ಮ ತಿಳಿಸಿದರು.ಗ್ರಾಮದಲ್ಲಿನ ಎಸ್‌ಸಿ, ಎಸ್‌ಟಿ ವಸತಿ ನಿಲಯದ ಮಕ್ಕಳಿಗೆ ರಾತ್ರಿ ಟ್ಯೂಷನ್ ಹೇಳಲು ಸ್ಥಳೀಯ ಓರ್ವ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿ ಎಂದು ಗ್ರಾಮದ ಟಿ.ಗೌತಮ್ ಆಗ್ರಹಿಸಿದರು.
ನಿಲಯಪಾಲಕ ಕಳಕಪ್ಪ ನಮಗೆ ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ ಒಬ್ಬರನ್ನು ನೇಮಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.ಮರಬ್ಬಿಹಾಳು ರಸ್ತೆಯಲ್ಲಿ ಜಂಗಲ್‌ಕಟಿಂಗ್ ಕೂಡಲೇ ಮಾಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ನರೇಗಾ ಯೋಜನೆಯಡಿ ರೇಷ್ಮೆ ಬೆಳೆ ಮಾಡಿಕೊಳ್ಳಲು ಅವಕಾಶವಿದ್ದು, ಫಲಾನುಭವಿಗಳು ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ ಎಂದು ರೇಷ್ಮೆ ಇಲಾಖೆಯ ಅಧಿಕಾರಿ ಹಾಲಪ್ಪ ಸಾರ್ವಜನಿಕರಿಗೆ ತಿಳಿಸಿದರು. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಆರಂಭಿಸುವಂತೆ ಹಾಗೂ ತಿಗಳನಕೆರೆ ಬೀಮನಕೆರೆ ಕಾಲುವೆಗಳನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಹನುಮಕ್ಕ, ಸದಸ್ಯರಾದ ಎನ್.ನಾಗರಾಜ, ಎಸ್.ಗಾಳೆಪ್ಪ, ಟಿ.ಮಂಜುನಾಥ, ಸಿ.ಎಲ್. ಕುಮಾರ, ಉಪ್ಪಾರ ಹುಲಿಗೆಮ್ಮ, ಕಾರ್ಯದರ್ಶಿ ಶಂಕ್ರಗೌಡ್ರು, ಎಂಜಿನಿಯರ್ ಅರ್ಚನಾ, ಗಿರೀಶ್, ಸಿಬ್ಬಂದಿ ಚರಂತೇಶ, ಲಿಂಗರಾಜ, ಬಿಎಫ್‌ಟಿ ಮೈಲಪ್ಪ ಇದ್ದರು.