ಭಟ್ಕಳ ಸರ್ಕಾರಿ ಆಸ್ಪತ್ರೆಗೆ 10 ಹಾಸಿಗೆ ಐಸಿಯು ನಿರ್ಮಾಣ: ಶ್ಯಾನಭಾಗ

| Published : May 22 2025, 01:18 AM IST / Updated: May 22 2025, 01:19 AM IST

ಭಟ್ಕಳ ಸರ್ಕಾರಿ ಆಸ್ಪತ್ರೆಗೆ 10 ಹಾಸಿಗೆ ಐಸಿಯು ನಿರ್ಮಾಣ: ಶ್ಯಾನಭಾಗ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳ ತಾಲೂಕು ಆಸ್ಪತ್ರೆ ಸಾಕಷ್ಟು ಅಭಿವೃದ್ಧಿ ಕಂಡಿದೆ.

ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಅನಿವಾಸಿ ಭಾರತೀಯ ಉದ್ಯಮಿ ವಾಮನ ರಾಮನಾಥ ಶ್ಯಾನಭಾಗ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಭಟ್ಕಳ ತಾಲೂಕು ಆಸ್ಪತ್ರೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರತಿದಿನ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯೇ ಸಾಕ್ಷಿಯಾಗಿದೆ. ತಾಲೂಕಿನ ಜನತೆಗೆ ಅವಶ್ಯವಿರುವ 10 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕವನ್ನು ನಿರ್ಮಾಣ ಮಾಡಿಕೊಡಲು ನಿರ್ಧಾರ ಮಾಡಲಾಗಿದೆ. ಇದರಿಂದ ಈ ಭಾಗದ ಅನೇಕರಿಗೆ ಸಹಾಯಕವಾಗಲಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಭಟ್ಕಳದಲ್ಲಿ ಬ್ಲಡ್ ಬ್ಯಾಂಕ್ ಮಾಡಲು ಎಲ್ಲ ಕಡೆಯಿಂದಲೂ ಒತ್ತಡವಿದೆ. ಆದರೆ ಬ್ಲಡ್ ಬ್ಯಾಂಕ್ ಮಾಡಲು ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಹಲವರು ಬ್ಲಡ್ ಬ್ಯಾಂಕ್ ಮಾಡಲು ಮುಂದೆ ಬಂದರೂ ನಿರ್ವಹಣೆ ಮಾಡಲು ಸೂಕ್ತ ಪೆಥಾಲಜಿಸ್ಟ್ ದೊರೆಯದೇ ಇರುವುದರಿಂದ ಹಿನ್ನೆಡೆಯಾಗಿದೆ. ಬ್ಲಡ್ ಬ್ಯಾಂಕ್ ಇಲ್ಲವಾದರೂ ನಮಗೆ ಯಾವತ್ತು ಬ್ಲಡ್ ದೊರೆಯುವುದಕ್ಕೆ ತೊಂದರೆಯಾಗಿಲ್ಲ. ಪ್ರಸ್ತುತ ನಮಗೆ ಬ್ಲಡ್ ಸ್ಟೋರೇಜ್ ಯುನಿಟ್ ಮಂಜೂರಿಯಾಗಿದೆ. ಉಡುಪಿಯ ಬ್ಲಡ್ ಬ್ಯಾಂಕ್‌ನಿಂದ ನಮಗೆ ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.

ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿದರು. ಉಡುಪಿಯ ರಕ್ತನಿಧಿ ಕೇಂದ್ರದ ವೈಧ್ಯಾಧಿಕಾರಿ ಡಾ. ವೀಣಾ ಕುಮಾರಿ ಮಾತನಾಡಿ ರಕ್ತದಾನ ಮಹತ್ವವನ್ನು ತಿಳಿಸಿಕೊಟ್ಟರು.

ವೇದಿಕೆಯಲ್ಲಿ ತಂಜೀಂ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಖೀಬ್ ಎಂ.ಜೆ., ಆನಂದ ಆಶ್ರಮ ಕಾನ್ವೆಂಟ್ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲವಿನಾ ಜ್ಯೋತಿ ಡಿಸೊಜ ಉಪಸ್ಥಿತರಿದ್ದರು. ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ ಸ್ವತಃ ತಾವೇ ಮುಂದೆ ಬಂದು ಮೊದಲಿಗರಾಗಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಶಿಬಿರದ ಸಂದರ್ಭದಲ್ಲಿ ಆಗಮಿಸಿ ಶುಭ ಹಾರೈಸಿದರು.

ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.