ಸಾರಾಂಶ
ಹಿರೇಕೆರೂರು: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕೋಡ, ಕಚವಿ ಹಾಗೂ ಹೊಸಕಟ್ಟಿ ಗ್ರಾಮಗಳ ಪಶು ಆಸ್ಪತ್ರೆಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ತಲಾ ಒಂದು ಕಟ್ಟಡಕ್ಕೆ ₹60 ಲಕ್ಷದಂತೆ ಒಟ್ಟು 1.80 ಕೋಟಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025- 26ನೇ ಸಾಲಿನ ಆಯವ್ಯಯದಲ್ಲಿ ಸಿಎಂ ಸಿದ್ಧರಾಮಯ್ಯನವರು 100 ಪಶುವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್ ಸಹಯೋಗದಲ್ಲಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆ ಪ್ರಕಾರ 100 ಪಶು ಆಸ್ಪತ್ರೆಗಳಲ್ಲಿ ಹಿರೇಕೆರೂರು ತಾಲೂಕಿನ ಕೋಡ, ಕಚವಿ ರಟ್ಟೀಹಳ್ಳಿ ತಾಲೂಕಿನ ಹೊಸಕಟ್ಟಿ ಪಶು ಆಸ್ಪತ್ರೆಗಳ ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಪಶಸಂಗೋಪನಾ ಸಚಿವ ವೆಂಕಟೇಶ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಧನ್ಯವಾದ ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ನಮ್ಮ ಕ್ಷೇತ್ರದ ಕಚವಿ ಹಾಗೂ ಕೋಡಮಗ್ಗಿ ಗ್ರಾಮಗಳಿಗೆ ಪಶು ಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ಕಚವಿ ಗ್ರಾಮದ ನೂತನ ಪಶು ಚಿಕಿತ್ಸಾಲಯದ ಉದ್ಘಾಟನೆಗೆ ಆಗಮಿಸಿದ್ದ ಪಶಸಂಗೋಪನಾ ಸಚಿವ ವೆಂಕಟೇಶ ಅವರು ನೂತನ ಕಟ್ಟಡ ಮಂಜೂರು ಮಾಡುವುದಾಗಿ ಘೋಷಣೆ ಮಾಡಿದ್ದರು. ಅವರ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ ಎಂದರು.2024- 25ನೇ ಸಾಲಿನ ಆಸ್ಕಾಡ್ ಯೋಜನೆಯಡಿ ನೂತನ ಪ್ರಯೋಗಾಲಯ ಮಂಜೂರಾಗಿದ್ದು, ಪ್ರಯೋಗಾಲಯಕ್ಕೆ ಮಂಜೂರಾದ ₹10 ಲಕ್ಷದಲ್ಲಿ ₹2 ಲಕ್ಷವನ್ನು ಪ್ರಯೋಗಾಲಯ ಪರಿಕರಗಳಿಗೆ ಹಾಗೂ ₹8 ಲಕ್ಷವನ್ನು ಪ್ರಯೋಗಾಲಯ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.ಈಗಾಗಲೇ ತಾಲೂಕಿನಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಹಾಗೂ ಚರ್ಮಗಂಟು ಲಸಿಕೆ ಹಾಕಲಾಗಿದೆ. ಸದ್ಯ ತಾಲೂಕಿನಲ್ಲಿ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿಲ್ಲ. ಜೂನ್ ಮತ್ತು ಜುಲೈ ತಿಂಗಳಲ್ಲಿ ಕುರಿ ಮತ್ತು ಮೇಕೆಗಳಿಗೆ ಕರಳು ಬೇನೆ ಲಸಿಕೆ ಹಾಕಲು ಪಶುಪಾಲನಾ ಇಲಾಖೆ ಸನ್ನದ್ಧವಾಗಿದೆ. ಕ್ಷೇತ್ರದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲ. ಹೆಚ್ಚಿನ ಔಷಧಕ್ಕೆ ಬೇಡಿಕೆ ಬಂದ ಸಂದರ್ಭದಲ್ಲಿ ಔಷಧವನ್ನು ಪೂರೈಸಲು ಸರ್ಕಾರ ಸಿದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಹಿರಿಯ ಪಶು ವೈದ್ಯಾಧಿಕಾರಿ ಡಾ. ಕಿರಣ್ ಎಲ್. ಇದ್ದರು.