ಹೊಸನಗರ ತಾಲೂಕಿನಲ್ಲಿ 45 ಬಿಎಸ್‍ಎನ್‌ಎಲ್ ಟವರ್ ನಿರ್ಮಾಣ: ಸಂಸದ ರಾಘವೇಂದ್ರ ಭರವಸೆ
KannadaprabhaNewsNetwork | Published : Oct 13 2023, 12:15 AM IST
ಹೊಸನಗರ ತಾಲೂಕಿನಲ್ಲಿ 45 ಬಿಎಸ್‍ಎನ್‌ಎಲ್ ಟವರ್ ನಿರ್ಮಾಣ: ಸಂಸದ ರಾಘವೇಂದ್ರ ಭರವಸೆ
ಸಾರಾಂಶ
ಪ್ರತಿ ಟವರ್‌ಗೆ ₹1.50 ಕೋಟಿ ವೆಚ್ಚದಲ್ಲಿ ಸುಮಾರು 26 ಟವರ್‌ಗಳು ನಿರ್ಮಾಣ ಆಗಿವೆ
ಹೊಸನಗರ: ತಾಲೂಕಿನಲ್ಲಿ ನೂತನವಾಗಿ 45 ಬಿಎಸ್‍ಎನ್.ಎಲ್ ಟವರ್‌ಗಳ ನಿರ್ಮಾಣ ಆಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದ ಗಾಯತ್ರಿ ಮಂದಿರದಲ್ಲಿ ಬಿಎಸ್‍ಎನ್‍ಎಲ್ ಬಳಕೆದಾರರ ಕುಂದುಕೊರತೆ ಸಭೆಯಲ್ಲಿ ಮಾಹಿತಿ ನೀಡಿದ ಸಂಸದರು, ಅರಣ್ಯ ಇಲಾಖೆ ಸೇರಿದಂತೆ ಕೆಲವು ಕಾರಣದಿಂದಾಗಿ ಟವರ್ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಪ್ರತಿ ಟವರ್‌ಗೆ ₹1.50 ಕೋಟಿ ವೆಚ್ಚದಲ್ಲಿ ಸುಮಾರು 26 ಟವರ್‌ಗಳು ನಿರ್ಮಾಣ ಆಗಿವೆ ಎಂದರು. ಅತ್ಯಂತ ಕುಗ್ರಾಮಗಳಿಗೂ ಮೊಬೈಲ್ ಸಂಪರ್ಕ ಒದಗಿಸುವ ಹಿನ್ನೆಲೆಯಲ್ಲಿ ಟವರ್‌ಗಳ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಕಾರ್ಯವೂ ಸಹ ಹೆಚ್ಚು ತೀವ್ರಗತಿಯಲ್ಲಿ ನಡೆಯುತ್ತಿದೆ. ಇದರಿಂದ ಜಾಲತಾಣದ ವೇಗವು ಹೆಚ್ಚಾಗಲಿದೆ ಎಂದು ಆಶಿಸಿದರು. ಈ ಸಂದರ್ಭ ಲೋಡ್ ಶೆಡ್ಡಿಂಗ್ ವೇಳೆಯಲ್ಲಿ ಮೊಬೈಲ್ ಸಂಪರ್ಕ ಕಡಿತ, ಕೆಲವು ಕಡೆಗಳಲ್ಲಿ ಡೈನಮೋ ಕೆಲಸ ಮಾಡುವುದಿಲ್ಲ, ಬಿಎಸ್‍ಎನ್‍ಎಲ್ ಸಂಪರ್ಕ ಕಡಿತ ಮುಂತಾದ ಸಮಸ್ಯೆಗಳ ಪರಿಣಾಮ ಖಾಸಗಿ ಮೊಬೈಲ್ ಸಂಪರ್ಕಕ್ಕೆ ಗ್ರಾಹಕರು ಮೊರೆ ಹೋಗುವಂತಾಗಿದೆ ಎಂದು ಕೆಲವರು ದೂರಿದರು. ಪ್ರತಿಕ್ರಿಯಿಸಿದ ಸಂಸದರು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಲೋಪದೋಷಗಳು ಇವೆ. ಇವುಗಳನ್ನು ಶೀಘ್ರದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಸಂಸದ ರಾಘವೇಂದ್ರ ಅವರ ಫಲವಾಗಿದೆ. ಮುಂದಿನ ಚುನಾವಣೆಯಲ್ಲಿ ಅವರ ಗೆಲವಿಗೆ ಸಹಕರಿಸಲು ಕೋರಿದರು. ಸಭೆಯಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಯ ಡಿಜಿಎಂ ವೆಂಕಟೇಶ್ ಸೇರಿದಂತೆ ವಿವಿಧ ಅಧಿಕಾರಿ ಉಪಸ್ಥಿತರಿದ್ದರು. - - - -11ಎಚ್‍ಒಎ1ಪಿ: ಹೊಸನಗರದಲ್ಲಿ ಬಿಎಸ್‍ಎನ್‍ಎಲ್ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.