ಸಾರಾಂಶ
ಯಲ್ಲಾಪುರ: ಪಟ್ಟಣದಲ್ಲಿ ಬಡವರಿಗಾಗಿ ಸರ್ಕಾರ ನಿರ್ಮಿಸಿರುವ ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆಗೊಳಿಸಲಾಗಿದೆ. ಇಂತಹ ಕಾರ್ಯಕ್ರಮವನ್ನು ಹಳಿಯಾಳದಲ್ಲಿಯೂ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದ ಹೆಬ್ಬಾರ ನಗರದಲ್ಲಿ ಶನಿವಾರ ಪ್ರಧಾನಿ ಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ನೆರವಿನಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿದ ೩೪೨ ಮನೆಗಳನ್ನು ಅರ್ಹ ಫಲಾನಿಭವಿಗಳಿಗೆ ಹಂಚಿಕೆ ಮಾಡಿ ಮಾತನಾಡಿದರು.
ಯಲ್ಲಾಪುರದಲ್ಲಿ ಈ ಯೋಜನೆಯಡಿ ೫೭೯ ಮನೆ ನಿರ್ಮಿಸಲಾಗಿದ್ದು, ಹಂತಾನುಹಂತವಾಗಿ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದ ಅವರು, ಶಾಸಕ ಶಿವರಾಮ ಹೆಬ್ಬಾರರ ಅವಿರತ ಪರಿಶ್ರಮದಿಂದ ಇಂತಹ ಅಪರೂಪದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಶ್ಲಾಘಿಸಿದರು.
ಮನೆ ಪಡೆಯುವ ವ್ಯಕ್ತಿಗಳು ಕೇವಲ ₹ ೧ ಲಕ್ಷ ಮಾತ್ರ ಭರಿಸಬೇಕಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸರ್ಕಾರದ ಯೋಜನೆಗಳ ಅನುಕೂಲ ತಲುಪಿಸುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆ ರೂಪಿಸಿದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸರ್ಕಾರ ಮನೆ ನಿರ್ಮಾಣಕ್ಕೆ ಉಚಿತವಾಗಿ ನೀಡಿರುವ ಸ್ಥಳದಲ್ಲಿ ಕಳೆದ ೭ ವರ್ಷಗಳಿಂದ ಹೊಂದಿದ್ದ ಮನೆ ನಿರ್ಮಾಣದ ನಿಯೋಜಿತ ಕನಸು, ಇಂದು ನನಸಾಗಿದೆ.
ಸರ್ಕಾರ ಪ್ರತಿ ಫಲಾನುಭವಿಗಳಿಗೆ ಈ ಉದ್ದೇಶಕ್ಕಾಗಿ ₹ ೪ ಲಕ್ಷ ನೀಡುತ್ತಿದ್ದು ಪ್ರಸ್ತುತ ನಿರ್ಮಾಣಗೊಂಡ ಮನೆಗಳಿಗೆ ಸರ್ಕಾರ ₹ ೭.೮೫ ಲಕ್ಷ ವ್ಯಯಿಸುತ್ತಿದೆ.
ಇದು ನಮ್ಮ ಯಾವುದೇ ಲಾಭಕ್ಕಾಗಿರದೇ, ಸಮಾಜದ ಬಗೆಗೆ ಸ್ವಾರ್ಥರಹಿತ ಚಿಂತನೆ ತೋರಬೇಕೆಂಬ ಉದ್ದೇಶದಿಂದ ಜನರ ಮೇಲಿರುವ ಋಣ ತೀರಿಸುವ ನಿಟ್ಟಿನಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಈ ಗೃಹ ಸಮುಚ್ಚಯದ ಆವಾರದಲ್ಲಿ ಮನೆಗಳಿಗೆ ಎಲ್ಲ ಬಗೆಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ₹ ೧೪ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವನ್ನೂ ನಿರ್ಮಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಒಟ್ಟೂ ೩೬,೮೭೫ ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು, ಇವುಗಳ ಉದ್ಘಾಟನೆಗೆ ಕ್ಷಣಗಣನೆ ಮಾಡಲಾಗುತ್ತಿದೆ. ಒಟ್ಟಾರೆ ಯಲ್ಲಾಪುರದಲ್ಲಿ ಈ ಸಂಬಂಧ ಕೈಗೊಳ್ಳಲಾದ ₹ ೨೧ ಕೋಟಿ ಮೊತ್ತದ ಅಭಿವೃದ್ಧಿ ಅನುದಾನಗಳ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಪಪಂ ಸದಸ್ಯರಾದ ಸುನಂದಾ ದಾಸ್, ಶ್ಯಾಮಿಲಿ ಪಾಟಣಕರ, ನರ್ಮದಾ ನಾಯ್ಕ, ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ, ಬಿಸಿಸಿ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ, ಪಕ್ಷದ ಪ್ರಧಾನ ಕಾರ್ಯದರ್ಶಿ ಅನಿಲ ಮರಾಠೆ, ಕೊಳಚೆ ನಿರ್ಮೂಲನಾ ಮಂಡಳಿಯ ಸರ್ಕಾರಿ ಕಾರ್ಯನಿರ್ವಾಹಕ ಅಭಿಯಂತರ ಶಂಭುಲಿಂಗಯ್ಯ, ಗುತ್ತಿಗೆದಾರ ಬೆಟಗಾರಿ ಇದ್ದರು.