ಕನಕಗಿರಿ: ಪಟ್ಟಣ ಸುವರ್ಣಗಿರಿ ಸಂಸ್ಥಾನ ವಿರಕ್ತಮಠಕ್ಕೆ ಸಂಬಂಧಿಸಿದ ಜಮೀನಿನಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಈಚೆಗೆ ಭೂಮಿಪೂಜೆ ನೆರವೇರಿಸಿದರು.

ಆನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಶ್ರೀಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ದಾನ ನೀಡುವಂತೆ ಕೇಳಿಕೊಂಡಿದ್ದೆ. ನನ್ನ ಮನವಿಗೆ ಶ್ರೀಗಳು ಮರು ಮಾತನಾಡದೇ 6 ಎಕರೆ ಭೂಮಿ ದಾನ ನೀಡಿದ್ದಾರೆ. ಅನೇಕ ವರ್ಷಗಳಿಂದ ಶ್ರೀಮಠವು ಶಿಕ್ಷಣ, ದಾಸೋಹ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಭೂಮಿ ನೀಡುವವರಿದ್ದರೆ ಕ್ರೀಡಾಂಗಣ ಹಾಗೂ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೂ ಅನುದಾನ ತರುತ್ತೇನೆ. ಈ ಆಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ₹42 ಕೋಟಿ ಅನುದಾನ ನೀಡಿದೆ ಎಂದರು.

ಚನ್ನಮಲ್ಲ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಪ್ರಮುಖರಾದ ಗಂಗಾಧರಸ್ವಾಮಿ, ನಾಗಪ್ಪ ಹುಗ್ಗಿ, ರಮೇಶ ನಾಯಕ, ಸಿದ್ದಪ್ಪ ನಿರ್ಲೂಟಿ, ವೀರೇಶ ಸಮಗಂಡಿ, ಅಮರೇಶ ಗೋನಾಳ, ಬಸವಂತಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ, ಶರಣೇಗೌಡ, ರಾಜಸಾಬ ನಂದಾಪುರ, ವಿರೂಪಣ್ಣ ಕಲ್ಲೂರ, ನಾಗರಾಜ ನವಲಿ, ತಹಸೀಲ್ದಾರ್ ವಿಶ್ವನಾಥ ಮುರಡಿ, ತಾಪಂ ಇಒ ರಾಜಶೇಖರ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಇದ್ದರು.

ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು ಕೇಂದ್ರ ಅಭಿವೃದ್ಧಿಯಾಗಬೇಕೆನ್ನುವುದು ಡಾ. ಚನ್ನಮಲ್ಲಶ್ರೀಗಳ ಮುಖ್ಯ ಧ್ಯೇಯವಾಗಿದೆ. ಶ್ರೀಗಳ ಆಸೆಯಂತೆ ಕನಕಗಿರಿ ಪಟ್ಟಣಕ್ಕೆ ನರ್ಸಿಂಗ್ ಕಾಲೇಜು ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜತೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ತರಲು ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.