ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮುಂಡಿಬೆಟ್ಟದ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಬಾಲಕಿಯರ ವಸತಿ ಪ್ರೌಢಶಾಲೆಯ ಆವರಣದಲ್ಲಿ ರೋಟರಿ ಐವರಿ ಹಾಗೂ ಡಾಟಾ ಆಕ್ಸಲ್ ಕಂಪನಿ ವತಿಯಿಂದ ಸೋಮವಾರ ವಸತಿ ನಿಲಯಕ್ಕೆ 11 ಲಕ್ಷ ರು. ವೆಚ್ಚದ 6 ಅಡಿ ಎತ್ತರದ ಕಾಂಕ್ರೀಟ್ ಗೋಡೆ ಹಾಗೂ ಕಬ್ಬಿಣದ ಗೇಟುಗಳ ಮುಖ್ಯದ್ವಾರಕ್ಕೆ ಚಾಲನೆ ನೀಡಲಾಯಿತು.ಡಾಟಾ ಆಕ್ಸಲ್ ಕಂಪನಿಯ ಉಪಾಧ್ಯಕ್ಷೆ ಅಮೇರಿಕಾ ದೇಶದ ಡಾಲ್ಸ್ ಪ್ರದೇಶದ ಜೀನ್ ಮೊಸ್ಲಿ ಮಾತನಾಡಿ, ಶಿಕ್ಷಣಕ್ಕೆ ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಮಕ್ಕಳು ಕಷ್ಟಪಟ್ಟು ಓದಿದಾಗ ಹೆಚ್ಚಿನ ಪ್ರತಿಫಲ ದೊರೆಯುತ್ತದೆ. ನಾನು ಈ ದಿನದ ಕಾರ್ಯಕ್ರಮಕ್ಕೆ 13 ಸಾವಿರ ಕಿ.ಮೀ ದೂರದಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಶಾಲೆಯ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಶಿಸ್ತನ್ನು ನೋಡಿ ನನಗೆ ಸಂತೋಷವಾಯಿತು ಎಂದರು.
ನಾವುಗಳು ಕೂಡ ಕಷ್ಟಪಟ್ಟು ಓದಿ ಜೀವನದಲ್ಲಿ ಮುಂದೆ ಬಂದಿದ್ದೇವೆ, ಹೆಣ್ಣು ಮಕ್ಕಳು ಜ್ಞಾನವನ್ನು ಪಡೆದರೆ, ಕುಟುಂಬ ಹಾಗೂ ಸಮಾಜ ಮುಂದೆ ಬರಲು ಸಾಧ್ಯವಾಗುತ್ತದೆಂದು ತಿಳಿಸಿದರು.ಶಾಲೆಯ ಮುಖ್ಯೋಪಾಧ್ಯಯರಾದ ಡಿ. ಕೃಷ್ಣಮೂರ್ತಿ ಮಾತನಾಡಿ, ಮನುಷ್ಯ ಬಗ್ಗಿ ಬಾಳಿದರೆ ಜೀವನ ಸಾರ್ಥಕ, ಪುಸ್ತಕ ಓದಿದ ತಕ್ಷಣ ಪಂಡಿತನಾಗುವುದಿಲ್ಲ, ಕಷ್ಟ, ನೋವು, ದುಃಖದಲ್ಲಿ ಭಾಗಿಯಾಗುವವರೇ ನಿಜವಾದ ಪಂಡಿತರಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಡಾಟಾ ಆಕ್ಸಲ್‌ನ ಪ್ರಶಾಂತ್ ಮಾತನಾಡಿ, ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ವಿಶೇಷವಾದ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನವನ್ನು ನೀಡುತ್ತೇವೆಂದು ತಿಳಿಸಿದರು.ಅಧ್ಯಕ್ಷತೆಯನ್ನು ರೋಟರಿ ಐವರಿ ಸಿಟಿಯ ಅಧ್ಯಕ್ಷ ಶಶಿಧರ್ ಮಾತನಾಡಿ, ರೋಟರಿ ಸಂಸ್ಥೆ ಒಂದು ಸಾಮಾಜಿಕ ಸಂಘಟನೆಯನ್ನು ಹೊಂದಿರುವ ಸೇವಾ ಮನೋಭಾವವುಳ್ಳ ಸಂಸ್ಥೆಯಾಗಿದೆ. ನೊಂದವರ ಕುಟುಂಬಗಳಿಗೆ ನೆರವಾಗಿ ಅವರ ಕಷ್ಟಗಳಿಗೆ ಸ್ಪಂದಿಸುವುದೇ ನಮ್ಮ ಗುರಿ ಎಂದು ಅಭಿಪ್ರಾಯಿಸಿದರು.
ಈ ನಿಟ್ಟಿನಲ್ಲಿ ಇಂದು ಸಾರ್ವಜನಿಕ ಪ್ರೌಢಶಾಲೆಗೆ ನಮ್ಮ ಕೈಲಾದ ಸಹಾಯವನ್ನು ನೀಡಲು ಬಂದಿದ್ದೇವೆಂದು ತಿಳಿಸಿದರು.ವೇದಿಕೆಯಲ್ಲಿ ರೋಟರಿ ಐವರಿ ಸಿಟಿಯ ಕಾರ್ಯದರ್ಶಿ ಶೋಭಾ ನಾಗರಾಜ್, ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ. ರಾಜಣ್ಣ, ಸುನಿಲ್ ಬಾಳಿಗಾ, ರೋಟರಿ ಸಮುದಾಯ ಸೇವೆಗಳ ನಿರ್ದೇಶಕರಾದ ಜ್ಯೋತಿ ಮುಕೇಶ್, ಮುಕೇಶ್, ಸಚ್ಚಿದಾನಂದ, ವಿ.ಎನ್.ಪ್ರಸಾದ್, ಕೇಶವ್ ಕಾಂಚನ್, ಬಿ. ಹರೀಶ್, ಬಾಲಚಂದರ್, ನಾಗರಾಜ್, ಬಾಬು ಅಖ್ತರ್, ಲತಾಸಚ್ಚಿ, ಪೂಜಾ ಬಾಳಿಗಾ, ಪುಷ್ಪಕಾಂಚನ್, ಮಮತಾ, ಮಂಜುಳಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಡಾಟಾ ಆಕ್ಸಲ್ ಸಿಬ್ಬಂದಿ ಇದ್ದರು.
ಬಿ.ಎನ್. ಪ್ರಸಾದ್ ಸ್ವಾಗತಿಸಿ, ಸಮಾಜ ಸೇವಕರಾದ ಟಿ.ಎಸ್. ಸುಬ್ಬಣ್ಣ ನವರ ಸೇವಾ ಕಾರ್ಯಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು, ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.