ಕೊಪ್ಪಳ ವಿಧಾನಸಭಾ ಕ್ಷೇತ್ರದ ಬೋಚನಹಳ್ಳಿ - ಭೈರಾಪುರ - ನಿಲೋಗಿಪುರ - ಹಲವಾಗಲಿ ರಸ್ತೆಯಲ್ಲಿನ ಹಳ್ಳಕ್ಕೆ ₹7 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.
ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಬೋಚನಹಳ್ಳಿ - ಭೈರಾಪುರ - ನಿಲೋಗಿಪುರ - ಹಲವಾಗಲಿ ರಸ್ತೆಯಲ್ಲಿನ ಹಳ್ಳಕ್ಕೆ ₹7 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸೇತುವೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಂಚಾರ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಹಳ್ಳ ದಾಟುವಾಗ ಎದುರಾಗುವ ತೊಂದರೆಗಳಿಗೆ ಪರಿಹಾರ ದೊರೆಯಲಿದೆ. ಅಳವಂಡಿ-ನಿಲೋಗಿಪುರ ರಸ್ತೆಯ ಹಳ್ಳಕ್ಕೂ ಸೇತುವೆ ನಿರ್ಮಿಸಲು ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ ಅನುದಾನ ಒದಗಿಸಲಾಗಿದ್ದು, ಶೀಘ್ರ ಟೆಂಡರ್ ಕರೆದು ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.ಅಳವಂಡಿ ಹೋಬಳಿಯ ಕವಲೂರು-ಹಂದ್ರಾಳ ರಸ್ತೆಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ₹8.60 ಕೋಟಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಗತಿಪಥ ಯೋಜನೆಯಡಿ ₹28.17 ಕೋಟಿ ಮಂಜೂರಾಗಿದ್ದು, ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು.
2026-27ನೇ ಸಾಲಿನ ಅಪೆಂಡಿಕ್ಸ್-ಇ ಯೋಜನೆಯಡಿ ₹50 ಕೋಟಿ ವೆಚ್ಚದಲ್ಲಿ ಆರು ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಕೆಕೆಆರ್ಡಿಬಿ ಹಾಗೂ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ ಅನುದಾನ ಪಡೆದು 2027ರೊಳಗೆ ಗ್ರಾಮದಿಂದ ಗ್ರಾಮಕ್ಕೆ ಹಾಗೂ ಗ್ರಾಮಗಳಿಂದ ಕೊಪ್ಪಳ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದರು.ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಸೇರಿದಂತೆ ಹೊಸ ಯೋಜನೆಗಳ ಅನುದಾನವನ್ನೂ ಬಳಸಿಕೊಂಡು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಈಗ ಅಡಿಗಲ್ಲು ನೆರವೇರಿಸಿರುವ ಸೇತುವೆ ಕಾಮಗಾರಿಯನ್ನು ತಕ್ಷಣ ಆರಂಭಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಗವಿಸಿದ್ದಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಭರಮಪ್ಪ ಹಟ್ಟಿ, ಹನುಮರೆಡ್ಡಿ ಅಂಗನಕಟ್ಟಿ, ಕೆ.ಎಂ. ಸೈಯದ್, ಭೀಮಣ್ಣ ಬೋಚನಹಳ್ಳಿ, ಗುರುರಾಜ ಹಳ್ಳಿಕೇರಿ, ಹನುಮೇಶ ಹೊಸಳ್ಳಿ, ತೋಟಪ್ಪ ಸಿಂಟ್ರ, ಅನ್ವರ್ ಗಡಾದ್, ಚೌಡಪ್ಪ ಜಂತಲಿ, ಯಲ್ಲಪ್ಪ ನಿಲೋಗಿಪುರ, ಮುದಿಯಪ್ಪ ಅವೊಜಿ, ನಿಂಗಪ್ಪ ಮೇಟಿ, ಪರಶುರಾಮ ಮೆಕ್ಕಿ, ಕನಕರಾಜ ಹನಕುಂಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಬೂದಿಹಾಳ ಉಪಸ್ಥಿತರಿದ್ದರು.