ಸಾರಾಂಶ
ನಗರದ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕತೆವಿದ್ದು, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಜನರ ಸಹಕಾರವು ಅತ್ಯಗತ್ಯ
ಕನ್ನಡಪ್ರಭ ವಾರ್ತೆ ರಾಯಚೂರು
ಸಾರ್ವನಿಕರ ಸಹಕಾರದಿಂದ ರಾಯಚೂರನ್ನು ಸ್ವಚ್ಛತಾ ನಗರವನ್ನಾಗಿ ಮಾಡಲು ಸಾಧ್ಯವಾಗಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹೇಳಿದರು.ಸ್ಥಳೀಯ ನೇತಾಜಿ ನಗರದ ಶೆಟ್ಟಿಭಾವಿ ವೃತ್ತದಿಂದ ಸೂಪರ್ ಮಾರ್ಕೆಟ್ ವರೆಗೆ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ನಗರದ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕತೆವಿದ್ದು, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಜನರ ಸಹಕಾರವು ಅತ್ಯಗತ್ಯ ಎಂದರು.
ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡಿ ಕೊಳ್ಳುತ್ತೇವೆ. ಅದೇ ರೀತಿಯಲ್ಲಿ ನಗರದ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೇವಲ ಆಡಳಿತ ಮಂಡಳಿಯಿಂದ ಸಾಧ್ಯವಿಲ್ಲ. ಇದರ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಕಳೆದ ಒಂದು ವರ್ಷದಿಂದ ಪೌರಕಾರ್ಮಿಕರನ್ನು ಒಗ್ಗೂಡಿಸಿ ವಾರ್ಡ್ ವಾರು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿತ್ತು. ಎರಡು ಮೂರು ದಿನ ಬಳಿಕ ಮತ್ತೆ ಅದೇ ವಾರ್ಡ್‌ನಲ್ಲಿ ಕಸ ಶೇಖರಣೆ ಆಗುತ್ತಿದೆ. ಇದರಿಂದ ನಾವು ಎಷ್ಟೆ ಸ್ವಚ್ಛತಾ ಕೆಲಸ ಮಾಡಿದರೂ ಮತ್ತೆ ಕಸ ಬರುತ್ತಿದ್ದು, ಇದಕ್ಕೆ ಜಾಗೃತಿ ಕೊರತೆ ಇದೆ. ಪ್ರತಿ ಮನೆಯಿಂದಲೂ ಕಸ ಸಮರ್ಪಕ ವೀಲೆವಾರಿ ಆಗಬೇಕಿದೆ. ಜೊತೆಗೆ ನಗರದಲ್ಲಿನ ವ್ಯಾಪಾರಸ್ಥರು, ಅಂಗಡಿಗಳು, ಆಸ್ಪತ್ರೆ ಸೇರಿದಂತೆ ಎಲ್ಲಾ ಕಡೆಯಿಂದ ಕಸ ಶೇಖರಣೆ ಮಾಡಿ ವೀಲೆವಾರಿ ಮಾಡಲು ಕೊ-ಆರ್ಡಿನೇಷನ್ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ ಎಂದರು.ಸಮಾರಂಭದ ಸಾನ್ನಿಧ್ಯವನ್ನು ಕಿಲ್ಲೆದ್ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮೀಜಿ, ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕನವರು ವಹಿಸಿದ್ದರು. ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ಹಿರಿಯ ಸದಸ್ಯ ಜಯಣ್ಣ, ಜಿಂದಪ್ಪ, ಅನಿತಾ ತಿಮ್ಮಾರೆಡ್ಡಿ, ಹೇಮಲತಾ ಬೂದೆಪ್ಪ, ಬಿ.ರಮೇಶ, ತಿಮ್ಮರೆಡ್ಡಿ, ಹರಿಬಾಬು, ತಿಮ್ಮಪ್ಪ ನಾಯಕ, ನರಸರೆಡ್ಡಿ, ಭೀಮರಾಯ, ಮಹಮದ್ ಶಾಲಂ, ಮೌಲಾನ ಮೌಲಿ, ಸೈಯದ್ ಚಾಂದ್ ವೀರ ಹುಸೇನ್, ಸೈಯದ್ ಅಲಿ ಸೇರಿದಂತೆ ಇತರರು ಇದ್ದರು.