Construction of a corporate-style building at a cost of five crore.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಡಿಸಿಸಿ ಬ್ಯಾಂಕ್) ಅಮೃತ ಭವನದ ನಿರ್ಮಾಣಕ್ಕೆ ಶುಕ್ರವಾರ ಬ್ಯಾಂಕಿನ ಕೇಂದ್ರ ಕಚೇರಿ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥ ಗೌಡ, ಶಾಸಕ ಹಾಗೂ ಬ್ಯಾಂಕಿನ ನಿರ್ದೇಶಕರೂ ಆದ ಗೋಪಾಲಕೃಷ್ಣ ಬೇಳೂರು, ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಎಂ. ಶ್ರೀಕಾಂತ್, ಸಿ.ಹನುಮಂತು, ಕೆ.ಪಿ.ರುದ್ರೇಗೌಡ, ಬಸವರಾಜ್, ದುಗ್ಗಪ್ಪ ಗೌಡ, ಎನ್.ಜಿ. ಸುಧೀರ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಆ ಬಳಿಕ ನಡೆದ ಸರಳ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥ ಗೌಡ ಮಾತನಾಡಿ, ಬರುವ 2028ಕ್ಕೆ ಡಿಸಿಸಿ ಬ್ಯಾಂಕ್ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಅದರ ಸವಿನೆನಪಿಗೆ ಅಮೃತ ಭವನ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 5 ಕೋಟಿ ರು. ವೆಚ್ವದ ಈ ಭವನ ಸಂಪೂರ್ಣವಾಗಿ ಕಾರ್ಪೊರೇಟ್ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಅಮೃತ ಮಹೋತ್ಸವದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಆಗಬೇಕೆನ್ನುವ ಗುರಿ ಹೊಂದಲಾಗಿದೆ ಎಂದರು.ಡಿಸಿಸಿ ಬ್ಯಾಂಕ್‌ಗೆ ಪ್ರಸ್ತುತ ಸುಮಾರು 3.5 ಲಕ್ಷ ಗ್ರಾಹಕರಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ಶಾಖೆಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ. ಅಮೃತ ಮಹೋತ್ಸವದ ವೇಳೆಗೆ ಬ್ಯಾಂಕ್‌ನ ಶಾಖೆಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಹೊಸ ಶಾಖೆಗಳನ್ನು ಆರಂಭಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಡಿಸಿಸಿ ಬ್ಯಾಂಕ್ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸದ ಸಂಗತಿ. ಜಿಲ್ಲೆಯ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಬ್ಯಾಂಕ್ ಮಹತ್ವದ ಕೊಡುಗೆ ನೀಡುತ್ತಿದ್ದು, ರೈತರ ಧ್ವನಿಯಾಗಿ ಕಾರ್ಯನಿರ್ವ ಹಿಸುತ್ತಿದೆ ಎಂದು ಹೇಳಿದರು.ಸಹಕಾರ ಕ್ಷೇತ್ರ ತಮಗೆ ಹೊಸದಾಗಿದ್ದರೂ, ಡಿಸಿಸಿ ಬ್ಯಾಂಕ್‌ನೊಂದಿಗೆ ಮಂಜುನಾಥ್ ಗೌಡ ಅವರು ಈ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕ ಗಳ ಅನುಭವ ಹೊಂದಿದ್ದಾರೆ. ಬ್ಯಾಂಕ್ ಇದೇ ರೀತಿ ನಿರಂತರ ಚಟುವಟಿಕೆಯಿಂದ ಕಾರ್ಯನಿರ್ವ ಹಿಸಿ, ಶೀಘ್ರದ ಅಮೃತ ಭವನದ ಉದ್ಘಾಟನೆ ನಡೆಯುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಚ್. ವಿಜಯ ದೇವ, ಚಂದ್ರಶೇಖರ್ ಗೌಡ, ಪರಮೇಶ್, ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ , ಹಿರಿಯ ಅಧಿಕಾರಿ ನಾಗಭೂಷಣ್ ಸೇರಿದಂತೆ ಬ್ಯಾಂಕ್‌ನ ಅಧಿಕಾರಿ ಗಳು, ಸಿಬ್ಬಂದಿ ಹಾಗೂ ಸಹಕಾರ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.------------------
ಕೋಟ್.....ಸಹಕಾರಿ ಕ್ಷೇತ್ರವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತಷ್ಟು ಬಲ ಪಡಿಸುವ ಉದ್ದೇಶ ಹೊಂದಲಾಗಿದೆ. ರೈತರಿಗೆ ಫೋನ್‌ಪೇ ಸೇರಿದಂತೆ ಆಧುನಿಕ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಕೃಷಿಯೇತರ ವ್ಯವಹಾರ ನಡೆಸುವವರಿಗೂ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿಂಗ್ ಸೌಲಭ್ಯವಿಲ್ಲದ ಗ್ರಾಮಗಳಿಗೂ ಡಿಸಿಸಿ ಬ್ಯಾಂಕ್ ಸೇವೆ ತಲುಪಿಸುವುದು ಪ್ರಮುಖ ಗುರಿಯಾಗಿದೆ.
-ಆರ್.ಎಂ. ಮಂಜುನಾಥ ಗೌಡ , ಡಿಸಿಸಿ ಬ್ಯಾಂಕ್ ಅಧ್ಯಕ್ಷ.-------------------
ಪೋಟೋ: 25ಎಸ್‌ಎಂಜಿಕೆಪಿ03ಶಿವಮೊಗ್ಗ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಡಿಸಿಸಿ ಬ್ಯಾಂಕ್) ಅಮೃತ ಭವನದ ನಿರ್ಮಾಣಕ್ಕೆ ಶುಕ್ರವಾರ ಬ್ಯಾಂಕಿನ ಕೇಂದ್ರ ಕಚೇರಿ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.