ಸಾರಾಂಶ
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಮುಳಬಾಗಿಲು ಪಟ್ಟಣದಲ್ಲಿ ಹೈಟೆಕ್ ಮಾದರಿಯ ಸರ್ಕಾರಿ ಆಸ್ಪತ್ರೆ ನಿರ್ಮಿಸಿ ಮೂಲ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿ ಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ೮.೫ ಕೋಟಿ ವೆಚ್ಚದಲ್ಲಿ ವಸತಿ ಗೃಹಗಳು ಮತ್ತು ಹೊರ ರೋಗಿ ವಿಭಾಗ ಹಾಗೂ ಐಸೋಲೇಷನ್ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ವಾರ ೨೨ ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಮುಂದಿನ ವಾರ ಲೋಕಸಭಾ ಚುನಾವಣೆಯ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಅದರ ಒಳಗೆ ನಗರದ ಹೊರವಲಯದಲ್ಲಿ ೨೨ ಕೋಟಿ ರೂ.ಗಳ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲು ಗುದ್ದಲಿ ಪೂಜೆ ಮಾಡಲಾಗುವುದು. ಆದ್ದರಿಂದ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಹಾಗೂ ಶಿಕ್ಷಣ ನೀಡುವುದು ಸರ್ಕಾರದ ಮೂಲ ಉದ್ದೇಶ ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಈಗಾಗಲೇ ರಾಜ್ಯದಲ್ಲಿ ಅಪಘಾತಗಳು ಹೆಚ್ಚಾಗುವ ವಲಯಗಳಲ್ಲಿ ಸ್ಥಳೀಯ ಆಸ್ಪತ್ರೆಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿ, ೬೫ ವಿಶೇಷ ಆ್ಯಂಬುಲೆನ್ಸುಗಳನ್ನು ಇನ್ನೊಂದು ತಿಂಗಳಲ್ಲಿ ವಿತರಿಸಲಾಗುವುದು. ಈ ಕುರಿತು ೪೫ ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.ಅನಿಮಿಯಾ ಮುಕ್ತ ರಾಜ್ಯ ನಿರ್ಮಾಣ
ರಾಜ್ಯದಲ್ಲಿ ರಕ್ತ ಹೀನತೆಯ ಸಮಸ್ಯೆ ಹೆಚ್ಚಿದ್ದು ಶೇ.೫೦ ಹೆಂಗಸರು ರಕ್ತ ಹೀನತೆಯಿಂದ ಬಳಲುತ್ತಿದ್ದರೆ, ಶೇ.೨೫ ಹೆಂಗಸರು ತೀವ್ರವಾದ ರಕ್ತಹೀನತೆಯ ಸಮಸ್ಯೆಗೆ ಸಿಲುಕಿದ್ದಾರೆ. ಆದ್ದರಿಂದ ಅನಿಮಿಯಾ ಮುಕ್ತ ರಾಜ್ಯಕ್ಕಾಗಿ ಸರ್ಕಾರ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲದಕ್ಕೂ ಸ್ಪಂದಿಸುತ್ತಿದ್ದು, ಕೆಲಸ ಮಾಡುವ ಶಾಸಕರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ, ಪ್ರಿಯಾಂಕಾ ಖರ್ಗೆ, ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಮುಖ್ಯಮಂತ್ರಿಗಳಿಗೆ ಹೆಚ್ಚು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಕೋಲಾರ ಜಾಲಪ್ಪ ಆಸ್ಪತ್ರೆ ದಂಧೆಯಾಗಿ ಬಿಟ್ಟಿದೆ, ಮುಳಬಾಗಿಲು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು ಮಹಿಳೆಯರ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ, ಆದ್ದರಿಂದ ಜಾಲಪ್ಪ ಆಸ್ಪತ್ರೆ ಮಾದರಿಯಲ್ಲಿ ತಾಲ್ಲೂಕಿಗೆ ಒಂದು ದೊಡ್ಡ ಆಸ್ಪತ್ರೆ ಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜಗದೀಶ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎನ್.ಸಿ.ನಾರಾಯಣ ಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್ ಕುಮಾರ್, ತಹಸೀಲ್ದಾರ್ ಟಿ.ರೇಖಾ, ಗ್ರೇಡ್-೨ ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಗುಣ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭ, ಆಡಳಿತ ವೈದ್ಯಾಧಿಕಾರಿ ಸುರೇಂದ್ರ, ನಗರಸಭೆ ಸದಸ್ಯರಾದ ಪ್ರಸಾದ್, ರಾಜಶೇಖರ್, ಜಬ್ಬೀವುಲ್ಲಾ, ಮುಖಂಡರಾದ ಗೊಲ್ಲಹಳ್ಳಿ ಜಗದೀಶ್, ನಾಗೇಶ್, ಮಂಡಿಕಲ್ ರಾಜು ಇದ್ದರು.