ಗ್ರಾಪಂನಿಂದ ಅನುಮತಿ ಪಡೆಯದೇ ಕಾನೂನುಬಾಹಿರವಾಗಿ ಸ್ವಂತ ಜಾಗ ಬಿಟ್ಟು ಸರ್ಕಾರಿ ಗಾಂವಠಾಣಾ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಶಿರಹಟ್ಟಿ: ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೇ ಸರ್ಕಾರಿ ಗಾಂವಠಾಣಾ ಜಾಗ ಅತಿಕ್ರಮಣ ಮಾಡಿಕೊಂಡು ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದು, ಗುರುವಾರ ಗ್ರಾಮದ ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಧ್ಯ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಮಸೀದಿ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೇ ಅನಧಿಕೃತವಾಗಿ ರಾತ್ರೋರಾತ್ರಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೊದಲು ತಗಡಿನ ಶೆಡ್ ಹಾಕಿ ಅದರ ಒಳಗೆ ಮಸೀದಿ ಕಟ್ಟಡ ಕಟ್ಟಲಾಗುತ್ತಿತ್ತು.ಮಸೀದಿ ಕಾಮಗಾರಿ ನಡೆಯುತ್ತಿರುವಾಗಲೇ ರಂಜಾನ್ ತಿಂಗಳಾಗಿದ್ದರಿಂದ ಗುರುವಾರ ಬೆಳ್ಳಂಬೆಳಗ್ಗೆ ನಮಾಜ್ ಮಾಡಲು ಮೈಕ್‌ನಿಂದ ಶಬ್ದ ಕೇಳಿಬಂದ ನಂತರ ಗ್ರಾಮಸ್ಥರು ಎಚ್ಚೆತ್ತು ವಿರೋಧಿಸಿದ್ದಾರೆ. ಇದೆಲ್ಲವೂ ಅಧಿಕಾರಿಗಳ ಗಮನಕ್ಕೆ ಬರದೇ ನಡೆಯಲು ಸಾಧ್ಯವೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ಸಧ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಗ್ರಾಪಂನಿಂದ ಅನುಮತಿ ಪಡೆಯದೇ ಕಾನೂನುಬಾಹಿರವಾಗಿ ಸ್ವಂತ ಜಾಗ ಬಿಟ್ಟು ಸರ್ಕಾರಿ ಗಾಂವಠಾಣಾ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ತಹಸೀಲ್ದಾರ್, ಪೊಲೀಸ್ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಇಒ ಇವರ ಸಮ್ಮುಖದಲ್ಲಿ ಎರಡು ಸಮುದಾಯಗಳ ಮುಖಂಡರ ಜತೆ ಸಂಧಾನ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದ್ದು, ಸಧ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.ಮಸೀದಿಗೆ ಬೀಗ: ಗ್ರಾಮ ಪಂಚಾಯಿತಿ ಗಮನಕ್ಕೆ ತರದೇ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿದೆ. ಗ್ರಾಮಕ್ಕೆ ತಹಸೀಲ್ದಾರ್ ಹಾಗೂ ಸಿಪಿಐ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳ ಸಮ್ಮುಖದಲ್ಲಿಯೇ ಮೈಕ್ ವಶಕ್ಕೆ ಪಡೆದು ಮಸೀದಿಗೆ ಬೀಗ ಹಾಕಲಾಗಿದೆ. ಹೆಸ್ಕಾಂ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಅಕ್ರಮ ನಳ ಜೋಡಣೆ ಮಾಡಿರುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಿಡಿಒ ಸುರೇಶ ಲಮಾಣಿ ತಿಳಿಸಿದರು.