ವಿಬಿಜಿ ರಾಮ್ ಜೀ ಯೋಜನೆಯಡಿ ಕೂಲಿಕಾರರಿಗೆ ವರ್ಷಕ್ಕೆ 125 ದಿನಗಳ ಕೆಲಸ ಒದಗಿಸಲಾಗುವುದು.
ಕನಕಗಿರಿ: ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಗೆ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಕೆ.ರಾಜಶೇಖರ ಭೂಮಿಪೂಜೆ ನೆರವೇರಿಸಿ ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮದ ಜಲಸಂಪನ್ಮೂಲ ಅಭಿವೃದ್ಧಿ ಹಾಗೂ ನೀರಿನ ಸಂರಕ್ಷಣೆಯ ಉದ್ದೇಶದಿಂದ ವಿಬಿಜಿ ರಾಮ್ ಜೀ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯಿಂದ ಮಳೆ ನೀರು ಸಂಗ್ರಹಕ್ಕೆ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಅನುಕೂಲವಾಗಲಿದೆ. ಕೆರೆ ನಿರ್ಮಾಣದಿಂದ ಗ್ರಾಮಸ್ಥರು ಹಾಗೂ ರೈತರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯೋಜನ ದೊರೆಯುವ ನಿರೀಕ್ಷೆ ಇದೆ ಎಂದರು.ಬಳಿಕ ತಾಪಂ ಸಹಾಯಕ ನಿರ್ದೇಶಕ ನಾಗೇಶ ಪೂಜಾರ ಮಾತನಾಡಿ, ವಿಬಿಜಿ ರಾಮ್ ಜೀ ಯೋಜನೆಯಡಿ ಕೂಲಿಕಾರರಿಗೆ ವರ್ಷಕ್ಕೆ 125 ದಿನಗಳ ಕೆಲಸ ಒದಗಿಸಲಾಗುವುದು. ಎಲ್ಲರೂ ಇದ್ದೂರಲ್ಲೆ ಕೆಲಸ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಯ ಜತೆ ಆರ್ಥಿಕವಾಗಿ ಸಬಲರಾಗಬೇಕು. ಸಮುದಾಯ ಕೆಲಸದ ಜತೆಗೆ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಓ ಹನುಮಂತಪ್ಪ, ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ, ತಾಂತ್ರಿಕ ಸಹಾಯಕ ಮಹೇಶ್ ರಡ್ಡಿ ಸೇರಿದ್ದಂತೆ ಗ್ರಾಮದ ಹಿರಿಯ ಮುಖಂಡರು, ಕಾಯಕ ಬಂಧುಗಳು, ಕೂಲಿಕಾರರು ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.ಇದೇ ವೇಳೆ ಎಸ್ಐಆರ್ ಕುರಿತು ಈಗಾಗಲೇ ಮತದಾರರ ಪಟ್ಟಿಯಿಂದ ಮರಣ ಹೊಂದಿದವರ ಹಾಗೂ ಶಿಫ್ಟ್ ಆಗಿರುವ ಮತದಾರರ ಹೆಸರನ್ನು ಗ್ರಾಪಂ ಗಳ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗಿದೆ. ಎಲ್ಲ ಕೂಲಿಕಾರರು ಮತ್ತೊಮ್ಮೆ ಪರಿಶೀಲಿಸಿ ಅದರಲ್ಲಿ ತಮ್ಮ ಹೆಸರು ಇದ್ದರೆ ಸೂಕ್ತ ದಾಖಲೆ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು ಎಂದು ತಾಪಂ ಇಒ ರಾಜಶೇಖರ ತಿಳಿಸಿದ್ದಾರೆ.