ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದಲ್ಲಿ ಎರೆಡು ಕಣ್ಣುಗಳಂತಿರುವ ಐತಿಹಾಸಿಕ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮತ್ತು ಶ್ರೀಪ್ರಸನ್ನ ಪಾರ್ವತಿ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಮಧ್ಯ ಭಾಗದಲ್ಲಿ ಪ್ರತಿ ವರ್ಷ ಗಣೇಶೋತ್ಸವ ಆಚರಿಸಲು 30 ಲಕ್ಷ ರು.ವೆಚ್ಚದಲ್ಲಿ ಶಾಶ್ವತ ಶೆಡ್ ನಿರ್ಮಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ತಿಳಿಸಿದರು.ಶ್ರೀವಿದ್ಯಾಗಣಪತಿ ಮಹಾ ಮಂಡಳಿಯಿಂದ 2025ರ ಆ.27 ರಂದು ಪ್ರಾರಂಭವಾಗಿ 9 ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವ ಧಾರ್ಮಿಕ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆ ಪೂರ್ವ ಸಿದ್ದತೆ ಸಭೆಯಲ್ಲಿ ಹಾಜರಿದ್ದ ಎಂಎಲ್‌ಸಿ ಆರ್.ರಾಜೇಂದ್ರ ಅವರಿಗೆ ಮಂಡಲಿಯವರು ಮನವಿ ಮಾಡಿದ್ದರು. ಇದರಿಂದ ಅವರ ಸೂಚನೆ ಮೇರೆಗೆ ಪ್ರತಿ ವರ್ಷ ಗಣಪತಿ ಕೂರಿಸಲು ಶಾಶ್ವತ ಶೆಡ್ ನಿರ್ಮಾಣವಾಗುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸುವುದಾಗಿ ಭರವಸೆ ನೀಡಿದರು.ಪ್ರತಿ ವರ್ಷದಂತೆ ಈ ಸಲವು ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ 9 ದಿನ ವಿವಿಧ ಧಾರ್ಮಿಕ ಪೂಜಾ ಕಂಕೈರ್ಯಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಗಣಪತಿ ವಿಸರ್ಜಿಸುವ ವೇಳೆ ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲು ಬಿಇಒ ಅವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಗಣೇಶ ಆಚರಣೆ ವೇಳೆ ಪ್ರತಿನಿತ್ಯ ವಿವಿಧ ಧಾರ್ಮಿಕ ಚಟುವಟಿಕೆಗಳು ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಭೆ ತೀರ್ಮಾನಿಸಿತು. ಮಂಡಳಿಯ ಖಜಾಂಚಿ ಜಿ.ಆರ್.ಧನ್‌ಪಾಲ್ ಜಮಾ ಖರ್ಚಿನ ವಿವಿರ ಸಲ್ಲಿಸಿದರು. ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು,ಸದಸ್ಯ ಮಂಜುನಾಥ್ ಆಚಾರ್, ಮಾಜಿ ಸದಸ್ಯರುಗಳಾದ ಆರ್.ಎಲ್.ಎಸ್.ರಮೇಶ್,ಶ್ರೀನಿವಾಸ್, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ಆಡಿಟರ್ ಲಕ್ಷ್ಮೀಪ್ರಸಾದ್, ಯುವ ಮುಖಂಡ ಆನಂದಕೃಷ್ಣ, ಕಿಶೋರ್, ಮೋಹನ್, ದೋಲಿಬಾಬು, ಜಿ.ನಾರಾಯಣರಾಜು, ಕಿಶೋರ್‌ಶಟ್ಟಿ, ಬಸವರಾಜು, ಪ್ರಧಾನ ಆರ್ಚಕ ಅನಂತಪದ್ಮನಾಭ ಭಟ್ಟರು ಇದ್ದರು.