ಬಿಡದಿ ಸಮೀಪ 2ನೇ ವಿಮಾನ ನಿಲ್ದಾಣ ನಿರ್ಮಾಣ ಫಿಕ್ಸ್

| Published : Apr 10 2025, 01:00 AM IST

ಸಾರಾಂಶ

ರಾಮನಗರ ಜಿಲ್ಲೆಗೆ ಸೇರಿದ ಚೂಡಹಳ್ಳಿ ಗ್ರಾಮದಲ್ಲಿ 5,471ಎಕರೆ ಮತ್ತು ಸೋಮನಹಳ್ಳಿ ಗ್ರಾಮದಲ್ಲಿ 4,605 ಎಕರೆಯನ್ನು ವಿಮಾನ ನಿಲ್ದಾಣಕ್ಕಾಗಿ ಗುರುತಿಸಲಾಗಿದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯಲ್ಲಿ ಗುರುತಿಸಿರುವ ಎರಡು ಸ್ಥಳಗಳ ಪೈಕಿ ಒಂದು ಸ್ಥಳ ಫಿಕ್ಸ್ ಮಾಡಿಕೊಂಡಿದೆ ಎನ್ನಲಾಗಿದೆ.

ರಾಮನಗರ ಜಿಲ್ಲೆಗೆ ಸೇರಿದ ಚೂಡಹಳ್ಳಿ ಗ್ರಾಮದಲ್ಲಿ 5,471ಎಕರೆ ಮತ್ತು ಸೋಮನಹಳ್ಳಿ ಗ್ರಾಮದಲ್ಲಿ 4,605 ಎಕರೆಯನ್ನು ವಿಮಾನ ನಿಲ್ದಾಣಕ್ಕಾಗಿ ಗುರುತಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ಉನ್ನತ ಮಟ್ಟದ ತಂಡವು ಮಂಗಳವಾರ ಈ ಎರಡು ಸ್ಥಳಗಳ ಪರಿವೀಕ್ಷಣೆ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ಮಾಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಈಗಾಗಲೇ ರಾಜ್ಯ ಸರ್ಕಾರ ಬಿಡದಿ ಭಾಗದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಭೂಸ್ವಾಧೀನ ಪ್ರಕ್ರಿಯೆಯೂ ಆರಂಭವಾಗಿದೆ. ಇದೀಗ ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ಸ್ವಲ್ಪ ಭೂಮಿ ಟೌನ್ ಶಿಪ್ ವ್ಯಾಪ್ತಿಯೊಳಗೂ ಬರಲಿದೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ ಟೌನ್ ಶಿಪ್ ನ ವಿಸ್ತಾರ ಕಡಿಮೆಯಾಗುವ ಸಾಧ್ಯತೆಗಳಿವೆ.

ನೆರೆಯ ತಮಿಳುನಾಡು ಸರ್ಕಾರ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹೊಸೂರಿನಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಬೆಂಗಳೂರು ಸುತ್ತಮುತ್ತಲ ಜಾಗದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಬಳಿ ಗುರುತಿಸಿರುವ ಎರಡು ಸ್ಥಳಗಳ ಪೈಕಿ ಒಂದು ಸ್ಥಳ ಅಂತಿಮಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ.

ಈಗ ದೇವನಹಳ್ಳಿಯಲ್ಲಿ ಇರುವ ಕೆಂಪೇಗೌಡ ಇಂಟರ್‌ ನ್ಯಾಶನಲ್‌ ಏರ್‌ಪೋರ್ಟ್‌ ಮೇಲಿನ ಒತ್ತಡ ತಗ್ಗಿಸಲು ಸರ್ಕಾರ ಮುಂದಾಗಿದೆ. ಹೊಸ ಏರ್‌ಪೋರ್ಟ್‌ ನಿರ್ಮಾಣಕ್ಕೆ ಸ್ಥಳ ಅಂತಿಮ ಮಾಡಿಲ್ಲವಾದರೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಂದರೆ ಕೆಐಎಡಿಬಿ ಬಿಡದಿ ಸಮೀಪದ ವಿವಿಧ ಗ್ರಾಮಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿಯೇ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ.

ಬಿಡದಿ ಬಳಿಯ ಯಾವ ಗ್ರಾಮಗಳಲ್ಲಿ ಭೂಸ್ವಾಧೀನ?

ಇನ್ನು, ಭೂಸ್ವಾಧೀನಕ್ಕಾಗಿ ಕೆಐಎಡಿಬಿ ಬಿಡದಿ ಸುತ್ತಲಿನ 10 ಹಳ್ಳಿಗಳ ಜಮೀನನ್ನು ಗುರುತಿಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ, ಚಿನ್ನಕುರ್ಚಿ, ಸೀಗೆಹಳ್ಳಿ, ಉತ್ತರಿ, ನಾಗನಾಯಕನಹಳ್ಳಿ, ಚೂಡಹಳ್ಳಿ, ನೆಲಗುಳಿ ಹಾಗೂ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಗೆ ಸೇರಿದ ಕೊಡಿಯಾಲಕರನಹಳ್ಳಿ, ದೊಡ್ಡಕುಂಟನಹಳ್ಳಿ, ಚಿಕ್ಕಕುಂಟನಹಳ್ಳಿ ಗ್ರಾಮಗಳಲ್ಲಿನ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಈ ಸ್ಥಳಗಳಲ್ಲಿ 2 ಬೆಟ್ಟಗಳು, 4 ಕೆರೆಗಳು ಇವೆ.

ಈ ಹಿಂದೆಯೇ ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಮೋಜಿಣಿದಾರರು ಮತ್ತು ತಪಾಸಕರಿಗೆ ಭೂ ಸ್ವಾಧೀನ ಪ್ರಕ್ರಿಯೆಗಾಗಿ ಸ್ಥಳ ತನಿಖೆ ವರದಿ, ಚೆಕ್ಕುಬಂದಿ ಹಾಗೂ ನಕ್ಷೆ ತಯಾರಿಸುವಂತೆ ಪತ್ರ ಕೂಡ ಬರೆದಿದ್ದಾರೆ ಎನ್ನಲಾಗಿದೆ.

ಭೂಸ್ವಾಧೀನದ ಹಿಂದಿರುವ ಲೆಕ್ಕಾಚಾರ ಏನು?

ಪ್ರಸ್ತುತ ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳಲಿರುವ ಪ್ರದೇಶ ಕೃಷಿ ಭೂಮಿಯಾಗಿದೆ. ಸಮತಟ್ಟಾದ, ಎಲ್ಲೂ ಎತ್ತರದ ಗುಡ್ಡ ಬೆಟ್ಟಗಳಿಲ್ಲದ ಹಾಗೂ ಪರಿಸರಕ್ಕೆ ಹೆಚ್ಚು ಹಾನಿ ಆಗದ ಆಯಕಟ್ಟಿನ ಜಾಗದಲ್ಲಿದೆ. ರಾಜಧಾನಿಗೆ ಸಮೀಪದಲ್ಲೇ ಇರುವ ಬಿಡದಿ ರಾಮನಗರ, ಮೈಸೂರು, ಮಂಡ್ಯಕ್ಕೆ ಸಂಪರ್ಕ ಕೊಂಡಿಯಾಗಿದೆ. ಭವಿಷ್ಯದಲ್ಲಿ ಅಭಿವೃದ್ಧಿಗೆ ಭಾರೀ ಅವಕಾಶ ಇರುವುದರಿಂದ ಇಲ್ಲಿಯೇ ಏರ್‌ಪೋರ್ಟ್‌ ಸ್ಥಾಪಿಸಿದಲ್ಲಿ ಉದ್ಯೋಗಾವಕಾಶದ ಸ್ಥಳೀಯರಿಗೆ ಬಾಗಿಲು ತೆರೆಯಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

ರಾಜಧಾನಿಯಿಂದ ಹೊರಗೆ ರಾಮನಗರ ಜಿಲ್ಲೆಗೆ ಬೆಂಗಳೂರು ಬ್ರ್ಯಾಂಡ್ ವ್ಯಾಲ್ಯು ತರಲು ಭೂಮಿಕೆ ಸಿದ್ದಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು , ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಅಲ್ಲದೆ, ನಮ್ಮ ಮೆಟ್ರೋ ಮಾರ್ಗವನ್ನು ಬಿಡದಿ ಮತ್ತು ಹಾರೋಹಳ್ಳಿವರೆಗೂ ವಿಸ್ತರಿಸುವ, ಬಿಡದಿ ಬಳಿ ಟೌನ್ ನಿರ್ಮಾಣ ಪ್ರಕ್ರಿಯೆಗಳು ನಡೆದಿವೆ. ಇದೀಗ ವಿಮಾನ ನಿಲ್ದಾಣಕ್ಕಾಗಿ ಸ್ಥಳ ಗುರುತಿಸಿರುವುದು ಡಿ.ಕೆ.ಶಿವಕುಮಾರ್ ರವರ ಪ್ರಯತ್ನಕ್ಕೆ ಪುಷ್ಠಿ ನೀಡಿದಂತಿದೆ.

...ಬಾಕ್ಸ್ ....

ತಮಿಳುನಾಡಿಗೆ ಟಕ್ಕರ್‌ ಕೊಡಲು ಬಿಡದಿ ಪ್ಲಾನ್‌?

ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಏರ್ ಪೋರ್ಟ್ ಪ್ರಸ್ತಾಪಕ್ಕೆ ಕೌಂಟರ್ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ದಕ್ಷಿಣ ಭಾಗದಲ್ಲಿ ಹೊಸ ಏರ್ ಪೋರ್ಟ್ ನಿರ್ಮಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇದೇ ಉದ್ದೇಶದಿಂದಲೇ ಬಿಡದಿ ಬಳಿ ಭೂಸ್ವಾಧೀನಕ್ಕೆ ಸಿದ್ಧತೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಅದಲ್ಲದೇ ಜೊತೆಗೆ ಬೆಂಗಳೂರು ದಕ್ಷಿಣ ಭಾಗದಲ್ಲೇ 2ನೇ ಎರ್‌ಪೋರ್ಟ್ ಸ್ಥಾಪಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಮೊದಲಿಂದಲೂ ಪಟ್ಟುಹಿಡಿದಿದ್ದು, ಅವರ ಒತ್ತಡಕ್ಕೆ ಸರ್ಕಾರ ಮಣಿದಿದೆಯೇ ಎಂಬ ಪ್ರಶ್ನೆ ಕೂಡ ಸೃಷ್ಟಿಯಾಗಿದೆ.

-------

9ಕೆಆರ್ ಎಂಎನ್ 10.ಜೆಪಿಜಿ

ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಗುರುತಿಸಿರುವ ರಾಮನಗರ ಜಿಲ್ಲೆಗೆ ಸೇರಿದ ಚೂಡಹಳ್ಳಿ ಗ್ರಾಮ (ಹಳದಿ ಗೆರೆ)ಮತ್ತು ಸೋಮನಹಳ್ಳಿ ಗ್ರಾಮ (ಕೆಂಪು ಗೆರೆ)

-----