ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬಸರಾಳು ಸಮೀಪವಿರುವ ಮಾಡವೀರನಹಳ್ಳಿ ಗ್ರಾಮದ ಬಳಿ ಜವಳಿ ಪಾರ್ಕ್ ನಿರ್ಮಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.ನಗರದ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸುಮಾರು ೫೬ ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಭಾಗದಲ್ಲಿ ಸರ್ಕಾರದ ಭೂಮಿಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು.
ಜವಳಿ ಪಾರ್ಕ್ ನಿರ್ಮಾಣ ಸಂಬಂಧ ಈಗಾಗಲೇ ಸರ್ಕಾರದೆದುರು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರೊಂದಿಗೂ ಈ ಕುರಿತಂತೆ ಮಾತುಕತೆ ನಡೆಸಿದ್ದು, ಅವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವುದಾಗಿ ಹೇಳಿದರು.ಏತ ನೀರಾವರಿ ಯೋಜನೆ:
ಮಂಡ್ಯ ತಾಲೂಕಿನ ಬಸರಾಳು, ನಾಗಮಂಗಲ ತಾಲೂಕಿನ ಹೊಣಕೆರೆ ಮತ್ತು ದೇವಲಾಪುರ ಹೋಬಳಿಯ ರೈತರಿಗೆ ಅನುಕೂಲವಾಗುವಂತೆ ೧೧೪೬ ಕೋಟಿ ರು. ವೆಚ್ಚದಲ್ಲಿ ಏತನೀರಾವರಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸಮಗ್ರ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕ್ಯಾಬಿನೆಟ್ ಮುಂದಿಟ್ಟು ಶೀಘ್ರವೇ ಒಪ್ಪಿಗೆ ಪಡೆಯಲಾಗುವುದು ಎಂದು ನುಡಿದರು.ಈ ಮೂರು ಹೋಬಳಿಗಳು ಹೇಮಾವತಿ ನಾಲೆಯ ಕೊನೆಯಭಾಗಕ್ಕೆ ಸೇರಿರುವುದರಿಂದ ಇಲ್ಲಿಗೆ ಹರಿದುಬರುತ್ತಿರುವ ನೀರು ಸಾಲುತ್ತಿಲ್ಲ. ಹಾಗಾಗಿ ಶ್ರೀರಂಗಪಟ್ಟಣದ ಕಾವೇರಿ ನದಿಯಿಂದ ಈ ಭಾಗಕ್ಕೆ ನೀರು ಹರಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದ ಸಮಯದಲ್ಲೂ ಯೋಜನೆ ಕುರಿತಂತೆ ಅವರ ಗಮನಸೆಳೆದಿದ್ದು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಸರ್ವೇಯರ್ ಹುದ್ದೆಗಳು ಖಾಲಿ:ತಾಲೂಕು ವ್ಯಾಪ್ತಿಯಲ್ಲಿ ಸುಮಾರು ಒಂದೂವರೆ ವರ್ಷದಿಂದಲೂ ಸರ್ವೇ ನಡೆಯದೆ ಪ್ರಕರಣಗಳು ಬಾಕಿ ಉಳಿದಿರುವ ವಿಚಾರ ಪ್ರಸ್ತಾಪವಾದ ವೇಳೆ ಸರ್ವೇಯರ್ ಹುದ್ದೆಗಳು ಖಾಲಿ ಇರುವುದಾಗಿ ಅಧಿಕಾರಿಯಿಂದ ಉತ್ತರ ಬಂತು. ಒಟ್ಟು ೩೪ ಸರ್ವೇಯರ್ ಹುದ್ದೆಗಳು ಮಂಜೂರಾಗಿದ್ದು, ೧೬ ಹುದ್ದೆಗಳು ಖಾಲಿ ಉಳಿದಿವೆ. ಮೂವರನ್ನು ನಿಯೋಜನೆ ಮೇರೆಗೆ ಬೇರೆಡೆಗೆ ನಿಯೋಜಿಸಲಾಗಿದೆ. ಅದರಲ್ಲಿ ಒಬ್ಬರು ಮೈಸೂರಿನ ಜೆಡಿಎಲ್‌ಆರ್ ಕಚೇರಿಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವುದಾಗಿ ಸಭೆಯ ಗಮನಕ್ಕೆ ತಂದರು.
ನಮ್ಮ ವ್ಯಾಪ್ತಿಯವರು ಮೈಸೂರಿನಲ್ಲಿ ಹೇಗೆ ಕೆಲಸ ಮಾಡುತ್ತಾರೆ. ಅದನ್ನು ರದ್ದುಗೊಳಿಸಿ ಇಲ್ಲಿಗೇ ಕರೆಸಿಕೊಳ್ಳುವ ವ್ಯವಸ್ಥೆ ಮಾಡುತ್ತೇನೆ. ಇಬ್ಬರು ಸರ್ವೇಯರ್‌ಗಳನ್ನು ಕೊಡುತ್ತಿದ್ದೇನೆ. ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಒಂದು- ಒಂದೂವರೆ ವರ್ಷದಿಂದ ಬಾಕಿ ಇರುವ ಸರ್ವೇ ಪ್ರಕರಣಗಳನ್ನು ೩ ತಿಂಗಳ ಅಭಿಯಾನ ನಡೆಸಿ ಸಂಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಹಕಾರದಿಂದ ಕೆಲಸ ಮಾಡಿ:
ನಗರಸಭೆಗೆ ೩೩ ಕೋಟಿ ರು. ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಆರಂಭಗೊಳ್ಳಬೇಕಿದೆ. ಈ ಸಮಯದಲ್ಲಿ ನಗರಸಭೆ ಮತ್ತು ಒಳಚರಂಡಿ ಮಂಡಳಿಯವರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ನಗರಸಭೆ ಆಯುಕ್ತೆ ಪಂಪಾಶ್ರಿ ಅವರಿಗೆ ಸೂಚಿಸಿದರು.ನಗರದ ಹಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಮತ್ತೆ ಕೆಲವೆಡೆ ಆರಂಭಗೊಳ್ಳಬೇಕಿದೆ. ಮೊದಲು ಒಳಚರಂಡಿ ಕೆಲಸ ಮಾಡಬೇಕೋ, ರಸ್ತೆ ಕಾಮಗಾರಿ ಮಾಡಬೇಕೋ ಎಂಬುದನ್ನು ಅಧಿಕಾರಿಗಳು ಆಲೋಚಿಸಿ ಕೆಲಸ ಮಾಡಬೇಕು. ರಸ್ತೆ ನಿರ್ಮಾಣವಾದ ಮೇಲೆ ಯುಜಿಡಿಗೆ ರಸ್ತೆಯನ್ನು ಅಗೆಯುವ ಕೆಲಸವಾಗಬಾರದು. ನಗರ ಸುಂದರವಾಗಿ ಕಾಣಬೇಕು. ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಜೋಡಿ ರಸ್ತೆಗಳಿರುವ ಕಡೆ ಮಧ್ಯೆ ಹೂವಿನ ಗಿಡಗಳನ್ನು ಬೆಳೆಸಿ ಅಂದವಾಗಿ ಕಾಣುವಂತೆ ಮಾಡಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳ ನೆರವನ್ನು ಪಡೆದುಕೊಂಡು ಅಲಂಕಾರಿಕ ಹೂವಿನ ಗಿಡಗಳನ್ನು ರಸ್ತೆ ಮಧ್ಯದ ಪಥದಲ್ಲಿಟ್ಟು ಆಕರ್ಷಣೆ ಹೆಚ್ಚಿಸುವಂತೆ ನಗರಸಭೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಲೂನ್, ಸ್ಪಾಗಳ ಮೇಲೆ ನಿಗಾ ವಹಿಸಿ:
ನಗರದಲ್ಲಿರುವ ಸಲೂನ್, ಸ್ಪಾಗಳ ಕಾರ್ಯಚಟುವಟಿಕೆಗಳ ಮೇಲೆ ನಗರಸಭೆ ಮತ್ತು ಪೊಲೀಸ್ ಅಧಿಕಾರಿಗಳು ನಿಗಾ ವಹಿಸಬೇಕು. ಮಂಡ್ಯವನ್ನು ವೇಶ್ಯಾವಾಟಿಕೆಯ ಅಡ್ಡೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ಶಾಸಕ ಪಿ.ರವಿಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವೇಶ್ಯಾವಾಟಿಕೆ ಅಡ್ಡೆಯಾಗುತ್ತಿದೆಯೇ ಮಂಡ್ಯ? ವರದಿಯನ್ನು ಉಲ್ಲೇಖಿಸಿ ಮಾತನಾಡಿದರು.
ಎಷ್ಟು ಯೂನಿಸೆಕ್ಸ್ ಸಲೂನ್, ಸ್ಪಾಗಳಿಗೆ ಪರವಾನಗಿ ನೀಡಲಾಗಿದೆ, ಎಷ್ಟು ಅಂಗಡಿಗಳು ಲೈಸೆನ್ಸ್ ಪಡೆದಿವೆ, ಅನಧೀಕೃತವಾಗಿ ಎಷ್ಟು ನಡೆಯುತ್ತಿವೆ. ಅವುಗಳು ಲೈಸೆನ್ಸ್‌ಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿವೆಯೇ. ಸಲೂನ್- ಸ್ಪಾ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿವೆಯೇ ಎಂಬುದನ್ನು ಆಗಾಗ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದರು.ವೇಶ್ಯಾವಾಟಿಕೆ ಜೊತೆಗೆ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ ಸೇರಿದಂತೆ ಎಲ್ಲಾ ಅಕ್ರಮಗಳಿಗೂ ಕಡಿವಾಣ ಹಾಕಬೇಕು. ಕ್ರಿಕೆಟ್ ಬುಕ್ಕಿಗಳೊಂದಿಗೆ ಪೊಲೀಸರು ಶಾಮೀಲಾಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಅಂತಹ ಪೊಲೀಸರ ವಿರುದ್ಧವೂ ಶೀಘ್ರ ಕ್ರಮ ಕೈಗೊಳ್ಳಬೇಕು. ಅಕ್ರಮ ದಂಧೆಗಳನ್ನು ಮುಚ್ಚಿಸಬೇಕು. ಬೆಂಗಳೂರು ಮತ್ತು ಮೈಸೂರಿನಿಂದ ಇಲ್ಲಿಗೆ ಬಂದು ದಂಧೆ ನಡೆಸುತ್ತಿದ್ದು ಅದಕ್ಕೆಲ್ಲಾ ಅವಕಾಶ ನೀಡಬಾರದು ಎಂದು ಡಿವೈಎಸ್ಪಿ ಲಕ್ಷ್ಮೀನಾರಾಯಣ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ವೀಣಾ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.