ಸಾರಾಂಶ
ಹೊಸಪೇಟೆ ಟರ್ಮಿನಲ್ ಮಾದರಿ । ₹37.10 ಕೋಟಿ ವೆಚ್ಚ । 400 ಲಾರಿಗಳ ನಿಲುಗಡೆಗೆ ಅವಕಾಶ, ಉಳಿದ ಜಾಗದಲ್ಲೂ ಅಭಿವೃದ್ಧಿಕನ್ನಡಪ್ರಭ ವಾರ್ತೆ ಹೊಸಪೇಟೆ
ದೇಶದಲ್ಲೇ ಸುಸಜ್ಜಿತ ಟ್ರಕ್ ಟರ್ಮಿನಲ್ ಅನ್ನು ಹೊಸಪೇಟೆಯಲ್ಲಿ ನಿರ್ಮಾಣ ಮಾಡಲಾಗಿದೆ. 400 ಲಾರಿಗಳ ನಿಲುಗಡೆಗೆ 20 ಎಕರೆ ಜಾಗದಲ್ಲಿ ಟರ್ಮಿನಲ್ ನಿರ್ಮಿಸಲಾಗಿದೆ. ಇನ್ನುಳಿದ 17.26 ಎಕರೆ ಜಾಗವನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ನಗರದ ಅಮರಾವತಿ ಬಳಿ ಚಿತ್ರದುರ್ಗದಿಂದ ವಿಜಯಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 50ರ ಬಲಭಾಗದಲ್ಲಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‌ನಿಂದ ನೂತನವಾಗಿ ನಿರ್ಮಿಸಿರುವ ಹೊಸಪೇಟೆ ಟ್ರಕ್ ಟರ್ಮಿನಲ್‌ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಲಾರಿ ಚಾಲಕರಿಗೆ 120 ಬೆಡ್‌ನ ಡಾರ್ಮಿಟರಿ ನಿರ್ಮಾಣ ಮಾಡಲಾಗಿದೆ. ಕ್ಯಾಂಟೀನ್ ವ್ಯವಸ್ಥೆ ಕೂಡ ಇದೆ. ಲಾರಿ ಚಾಲಕರು, ಕ್ಲೀನರ್‌ಗಳು ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗಿದೆ. ಲಾರಿ ಮಾಲಕರು ಕೂಡ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ನೂತನ ಟ್ರಕ್ ಟರ್ಮಿನಲ್‌ನಲ್ಲಿ ಒಂದು ತಿಂಗಳ ಕಾಲ ಲಾರಿ ಚಾಲಕರಿಗೆ ಉಚಿತ ಸೇವೆ ಒದಗಿಸಲು ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ನಗರದ ಯಶವಂತಪುರ, ದಾಸನಪುರ, ಮೈಸೂರು ನಗರದ ಬಂಡಿಪಾಳ್ಯ ಮತ್ತು ನಾಚನಹಳ್ಳಿ, ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶ, ಹೊಸಪೇಟೆಯ ಅಮರಾವತಿ, ಉತ್ತರಕನ್ನಡದ ದಾಂಡೇಲಿ, ಹುಬ್ಬಳಿಯ ಅಂಚಟಗೇರಿ, ಚಾಮರಾಜನಗರದ ಗುಂಡ್ಲುಪೇಟೆ, ರಾಯಚೂರು ಯರಮರಸ್ ಸೇರಿದಂತೆ ಒಟ್ಟು 9 ಟ್ರಕ್ ಟರ್ಮಿನಲ್‌ಗಳ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ ಚಾಲಕರಿಗೆ, ಕ್ಲೀನರ್‌ಗಳಿಗೆ, ಮಾಲೀಕರುಗಳಿಗೆ ನಿರ್ವಹಣೆದಾರರಿಗೆ ತಂಗುದಾಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಸರಕುಗಳನ್ನು ಇಳಿಸುವ ಮತ್ತು ಲೋಡಿಂಗ್ ವ್ಯವಸ್ಥೆ, ಲಾರಿಗಳಿಗೆ ಇಂಧನ ವ್ಯವಸ್ಥೆ, ವಾಹನ ಸ್ವಚ್ಚತೆ, ವಿಶ್ರಾಂತಿ ಕೊಠಡಿಗಳು, ಕ್ಯಾಂಟೀನ್‌ಗಳು, ಶೌಚಾಲಯ, ವೈದ್ಯಕೀಯ ಸೌಲಭ್ಯ ಒದಗಿಸಲು ಟ್ರಕ್ ಟರ್ಮಿನಲ್ ಸಹಕಾರಿಯಾಗಲಿವೆ. ಇದರಿಂದಾಗಿ ನಗರದೊಳಗೆ ವಾಹನಗಳು ಉಗುಳುವ ಹೊಗೆಯಿಂದ ಉಂಟಾಗುವ ವಾಯುಮಾಲಿನ್ಯ ಕಡಿಮೆ ಮಾಡಲು ಸಾಧ್ಯವಿದೆ. ಇದೀಗ ಉದ್ಘಾಟಿಸಿರುವ ಹೊಸಪೇಟೆಯ ಹೈಟೆಕ್ ಟ್ರಕ್ ಟರ್ಮಿನಲ್ ದೇಶದಲ್ಲೇ ಮಾದರಿಯಾಗಲಿದೆ. ಇವುಗಳ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಿತಾಸಕ್ತಿಯು ಮುಖ್ಯವಾಗಲಿದೆ. ಲಾರಿ ಚಾಲಕರು ಮತ್ತು ಮಾಲೀಕರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಈ ಭಾಗದ ಲಾರಿ ಚಾಲಕರ, ಮಾಲೀಕರ ಮೂರ್ನಾಲ್ಕು ದಶಕದ ಬೇಡಿಕೆ ಈಗ ಸಾಕಾರಗೊಂಡಿದೆ. ಇಂತಹ ಬೃಹತ್ ಟರ್ಮಿನಲ್ ನಿರ್ಮಾಣಕ್ಕೆ ಸಚಿವರ ಮುತುವರ್ಜಿಯೇ ಕಾರಣವಾಗಿದೆ. ಲಾರಿ ಚಾಲಕರ, ಕ್ಲೀನರ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಕೈಗಾರಿಕೋದ್ಯಮಕ್ಕೆ ಪೂರಕವಾಗಿ ಅವರು ಕೆಲಸ ಮಾಡುತ್ತಾರೆ. ಮೈನ್ಸ್ ಲಾರಿಗಳಲ್ಲಿ ದುಡಿಯುತ್ತಾರೆ. ಆದರೂ ಅವರ ಬದುಕು ಹಸನಾಗುತ್ತಿಲ್ಲ. ಅವರ ಸಮಸ್ಯೆಗಳಿಗೂ ಕಿವಿಗೊಡಬೇಕಿದೆ ಎಂದರು.ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮಾತನಾಡಿ, ನೂತನ ಟರ್ಮಿನಲ್‌ನಲ್ಲಿ 400 ಟ್ರಕ್ ನಿಲುಗಡೆ ಮಾಡಬಹುದಾಗಿದೆ. ಸಿಮೆಂಟ್ ಕಾಂಕ್ರಿಟ್ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸೌಕರ್ಯ, ಹೈಮಾಸ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಲಕರು ಮತ್ತು ಕ್ಲೀನರ್‌ಗಳಿಗೆ ಶೌಚಾಲಯ, ಸ್ನಾನದಗೃಹ ಸೇರಿದಂತೆ ವಿಶಾಲವಾದ ಡೈನಿಂಗ್ ಹಾಲ್, ಅಡುಗೆ ಮನೆ, ಉಗ್ರಾಣ, ಡಾರ್ಮಿಟರಿ ವ್ಯವಸ್ಥೆ ಕಲ್ಪಿಸುವ ಕಟ್ಟಡ ಟರ್ಮಿನಲ್ ಆವರಣದಲ್ಲಿದೆ. ಪೆಟ್ರೋಲ್ ಬಂಕ್ ಮತ್ತು ಸರ್ವೀಸ್ ಸ್ಟೇಷನ್, ವೇಬ್ರಿಡ್ಜ್ ಗೆ ನಿವೇಶನಗಳನ್ನು ಕಾಯ್ದಿರಿಸಲಾಗಿದೆ. ಅಷ್ಟಲ್ಲದೇ 100 ಸಾರಿಗೆ ನಿವೇಶನವನ್ನು ಲಾರಿ ಮಾಲೀಕರು ಮತ್ತು ಏಜೆಂಟ್‌ಗಳಿಗಾಗಿ ನಿರ್ಮಿಸಲಾಗಿದೆ. ಗೋಡೌನ್ ಪ್ಲಾಟ್‌ಗಾಗಿ ಒಟ್ಟು 22 ನಿವೇಶನಗಳ ಸಹಿತ ಸುಂದರ ಹಸಿರು ಪರಿಸರ ಆಕರ್ಷಣೀಯವಾಗಿದೆ ಎಂದರು.
ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಲಾರಿ ಮಾಲೀಕರ ಫೆಡರೇಷನ್ ಅಧ್ಯಕ್ಷ ನವೀನ್ ರೆಡ್ಡಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ರಾಮೋಜಿ ಗೌಡ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಅಕ್ರಂ ಷಾ, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಸಾರಿಗೆ ಇಲಾಖೆ ಜಂಟಿ ನಿರ್ದೇಶಕ ಸಿದ್ದಪ್ಪ ಪಲ್ಲೇದ್, ಆರ್‌ಟಿಒ ವಸಂತ ಕುಮಾರ್ ಚವ್ಹಾಣ್, ಮುಖಂಡರಾದ ಕೆ.ಬಿ. ಶ್ರೀನಿವಾಸ್ ರಡ್ಡಿ, ಮಣಿ, ಶಿವಪ್ಪ ಸೇರಿದಂತೆ ಲಾರಿ ಮಾಲೀಕರು, ಚಾಲಕರು ಭಾಗವಹಿಸಿದ್ದರು.