ಅನಿಲ ಚಿತಾಗಾರ ನಿರ್ಮಾಣ ಶ್ಲಾಘನೀಯ: ಭಂಡಾರಿ ಶ್ರೀನಿವಾಸ್

| Published : Aug 31 2024, 01:40 AM IST

ಸಾರಾಂಶ

ಕಡೂರು, ಪುರಸಭೆಯಿಂದ ಈ ಹಿಂದೆ ಸ್ಮಶಾನ ಅಭಿವೃದ್ಧಿಗೆ ಬಹಳಷ್ಟು ಕಾರ್ಯ ಮಾಡಲಾಗಿದೆ. ಇದೀಗ ಅನಿಲ ಚಿತಾಗಾರ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಪುರಸಭೆಯಿಂದ ಈ ಹಿಂದೆ ಸ್ಮಶಾನ ಅಭಿವೃದ್ಧಿಗೆ ಬಹಳಷ್ಟು ಕಾರ್ಯ ಮಾಡಲಾಗಿದೆ. ಇದೀಗ ಅನಿಲ ಚಿತಾಗಾರ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ರೋಟರಿ ಕ್ಲಬ್, ಪುರಸಭೆ ಹಾಗು ಸಾರ್ವಜನಿಕರ ಸಹಯೋಗದಲ್ಲಿ ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಮೀಪದ ರುದ್ರಭೂಮಿಯಲ್ಲಿ ಅನಿಲದಿಂದ ಶವದಹನ ಮಾಡುವ ಅನಿಲ ಚಿತಾಗಾರ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ ಈ ಜಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಪುರಸಭೆ ಮೂಲಕ 30 ಲಕ್ಷ ರು.ಗಳಲ್ಲಿ ವಿದ್ಯುತ್, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿತ್ತು. ಮುಂದೆಯೂ ಪುರಸಭೆಯಿಂದ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದರು.

ರೋಟರಿ ಮಾಜಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, 65 ಲಕ್ಷ ರು. ವೆಚ್ಚದಲ್ಲಿ ಈ ಅನಿಲ ಚಿತಾಗಾರ ನಿರ್ಮಾಣಗೊಳ್ಳಲಿದೆ. 120 ಅಡಿ ಎತ್ತರದ ಚಿಮಣಿ ನಿರ್ಮಾಣವಾಗಲಿದ್ದು, ಒಂದು ಶವ ದಹನಕ್ಕೆ 10 ಕೆಜಿ ಅನಿಲದ ಅಗತ್ಯವಿದೆ. ಒಟ್ಟು 19 ಸಿಲಿಂಡರ್ ಗಳನ್ನು ಸದಾ ಕಾಲ ಲಭ್ಯವಿರುವಂತೆ ಯೋಜನೆ ರೂಪಿಸಲಾಗಿದೆ. ಬೆಳೆಯುತ್ತಿರುವ ಕಡೂರು ಪಟ್ಟಣಕ್ಕೆ ಈ ಆಧುನಿಕ ಚಿತಾಗಾರ ಅಗತ್ಯವಿತ್ತು. ಸರ್ವ ಸಮಾಜದವರು, ಸಂಘ ಸಂಸ್ಥೆಗಳು ಇದಕ್ಕಾಗಿ ದೇಣಿಗೆ ನೀಡಿದ್ದಾರೆ. ರೋಟರಿ 56 ಸದಸ್ಯರು ಈ ಮಹತ್ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ವಿವರ ನೀಡಿದರು.ರೋಟರಿ ಕ್ಲಬ್ ಅಧ್ಯಕ್ಷ ಟಿ.ಡಿ.ರಾಜನ್, ರುದ್ರಭೂಮಿ ಸಮಿತಿ ಅಧ್ಯಕ್ಷ ಮುರುಳಿ ಕೊಠಾರಿ, ವಕೀಲ ಕೆ.ಜಿ.ಅಣ್ಣಪ್ಪ, ಪ್ರೇಮಬಿಂದು ಪ್ರತಿಷ್ಟಾನದ ಅಧ್ಯಕ್ಷ ಪ್ರೇಂ ಕುಮಾರ್, ಶ್ರೀನಿವಾಸ್, ಬಿ.ಶಿವಕುಮಾರ್, ಟಿ.ಡಿ.ಸತ್ಯನ್, ಚಂದ್ರಪ್ಪ, ಚಿನ್ನರಾಜು, ಪುಂಡಲೀಕ ರಾವ್ ಮತ್ತಿತರರು ಇದ್ದರು.

30ಕೆಕೆಡಿಯು1.ಕಡೂರು.

ರೋಟರಿ ಕ್ಲಬ್ ನೇತೃತ್ವದಲ್ಲಿ ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಮೀಪದ ರುದ್ರಭೂಮಿಯಲ್ಲಿ ಅನಿಲ ಚಿತಾಗಾರ ನಿರ್ಮಾಣ ಕಾಮಗಾರಿಗೆ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಚಾಲನೆ ನೀಡಿದರು.