ಸಾರಾಂಶ
ಜಿಲ್ಲೆಯ ಮಂಗಳೂರು ಗ್ರಾಮಾಂತರ, ಮಂಗಳೂರು ನಗರ, ಮತ್ತು ಸುಳ್ಯದಲ್ಲಿ ಇದಕ್ಕಾಗಿ ನಿವೇಶನಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು, ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸಲು ಉಪಯೋಗವಾಗುವಂತೆ ತಾಲೂಕು ಮಟ್ಟದಲ್ಲಿ ಬಾಲ ಭವನ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಮಂಗಳೂರು ಗ್ರಾಮಾಂತರ, ಮಂಗಳೂರು ನಗರ, ಮತ್ತು ಸುಳ್ಯದಲ್ಲಿ ಇದಕ್ಕಾಗಿ ನಿವೇಶನಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಮಂಗಳೂರು ನಗರದಲ್ಲಿ ಬಾಲ ಭವನದ ಕಟ್ಟಡ ದುರಸ್ತಿ ಕಾರ್ಯ ನಡೆಯುತ್ತಿದ್ದು ಕೆಲವೊಂದು ಕಾಮಗಾರಿಗಳು ಬಾಕಿ ಉಳಿದಿವೆ. ಸ್ಮಾರ್ಟ್ ಸಿಟಿ ವತಿಯಿಂದ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವಂತೆ ಡಾ.ಆನಂದ್ ಸೂಚಿಸಿದರು.ಮಳೆ ಬಳಿಕ ಪುಟಾಣಿ ರೈಲು ಸಂಚಾರ: ನಗರದ ಕದ್ರಿ ಉದ್ಯಾನವನದಲ್ಲಿರುವ ಪುಟಾಣಿ ರೈಲು ಈಗಾಗಲೇ ದುರಸ್ತಿಗೊಂಡಿದ್ದು, ಮಳೆ ಕಾರಣದಿಂದ ರೈಲಿನ ಓಡಾಟ ಸ್ಥಗಿತಗೊಳಿಸಲಾಗಿದೆ. ಮಳೆ ಕಡಿಮೆಯಾದ ನಂತರ ಪುಟಾಣಿ ರೈಲು ಮತ್ತೆ ಓಡಾಟ ನಡೆಸಲಿದೆ ಎಂದು ಅವರು ಹೇಳಿದರು.ಗ್ರಾಮೀಣ ಹಂತದಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಭೆಗಳು ಕೇವಲ ಕಾಟಾಚಾರಕ್ಕೆ ಹಾಜರಾತಿ ಹಾಕುವ ಮೂಲಕ ಕೊನೆಗೂಳ್ಳಬಾರದು. ಅತ್ಯಾಚಾರ, ವರದಕ್ಷಿಣೆ, ಬಾಲ್ಯ ವಿವಾಹ, ಕೌಟುಂಬಿಕ ಕಲಹ, ಮಹಿಳಾ ಶೋಷಣೆ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವಂತೆ ಆಗಬೇಕು. ಇಂತಹ ಶೋಷಣೆಗಳು ನಡೆದರೆ ಶೋಷಿತನಾದವನು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವಂತೆ ಆತ್ಮಸ್ಥೈರ್ಯ ಮೂಡಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮಾತನಾಡಿ, ಏಪ್ರಿಲ್‌ನಿಂದ ಜೂನ್‌ವರೆಗೆ ಮಂಗಳೂರು ನಗರ ಮತ್ತು ಮಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ತಲಾ ಒಂದೊಂದು ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ. ಒಂದು ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದರು.ಗೌರವ ಧನ ಹೆಚ್ಚಳಕ್ಕೆ ಮನವಿ: ಜಿಲ್ಲೆಯಲ್ಲಿರುವ ಸಾಂತ್ವನ ಕೇಂದ್ರಗಳ ಸಿಬ್ಬಂದಿ ಪಾಳಿಯಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಗೌರವಧನ ಹೆಚ್ಚಾಗದ ಕಾರಣ ಗೌರವಧನ ಹೆಚ್ಚಿಸುವಂತೆ ಸಭೆಯಲ್ಲಿ ಮನವಿ ಸಲ್ಲಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಅಧಿಕಾರಿಗಳು ಪದಾಧಿಕಾರಿಗಳು ಇದ್ದರು.