ಸಾರಾಂಶ
ಹುಕ್ಕೇರಿ ತಾಲೂಕಿನ ಹಿಡಕಲ್ ಆಣೆಕಟ್ಟು ಬಳಿ ಬಿದಿರು ಜೀವವೈವಿಧ್ಯ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಶಾಸಕ ನಿಖಿಲ್ ಕತ್ತಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸವಳು-ಜವಳು ಭೂಮಿ ತಡೆಯುವ ನಿಟ್ಟಿನಲ್ಲಿ ಬಿದಿರು ಬೆಳೆಯುವುದು ಅತೀ ಅಗತ್ಯವಾಗಿದೆ. ಈ ಭಾಗದ ರೈತರು ಮತ್ತು ಕುಶಲಕರ್ಮಿಗಳಿಗೆ ಅನೂಕೂಲವಾಗಲು ₹1 ಕೋಟಿ ವೆಚ್ಚದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಬಿದಿರು ಪಾರ್ಕ್ ಸ್ಥಾಪಿಸಲಾಗುವುದು. ಇಲ್ಲಿ 100ಕ್ಕೂ ಹೆಚ್ಚಿನ ವಿವಿಧ ಜಾತಿಯ ಬಿದಿರು ಸಸಿಗಳನ್ನು ನಾಟಿ ಮಾಡಲಾಗುವುದು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.ತಾಲೂಕಿನ ಹಿಡಕಲ್ ಆಣೆಕಟ್ಟು ಬಳಿ ಕೈಗೆತ್ತಿಕೊಂಡಿರುವ ಬಿದಿರು ಜೀವ ವೈವಿಧ್ಯ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಅಲಂಕಕಾರಿಕ ವಸ್ತುಗಳ ತಯಾರಿಕೆ, ರಸ್ತೆ, ಸೇತುವೆ ಮತ್ತು ಕಟ್ಟಡಗಳ ನಿರ್ಮಾಣ, ನೈಸರ್ಗಿಕ ಸಂರಕ್ಷಣೆಯಲ್ಲಿ ಬಿದಿರು ಮಹತ್ವದ ಪಾತ್ರ ನಿಭಾಯಿಸುತ್ತದೆ. ಬಿದಿರು ವೈವಿಧ್ಯವನ ನಿರ್ಮಾಣದಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಜೊತೆಗೆ ಈ ಪ್ರದೇಶದಲ್ಲಿ ರೈತರು, ವಿದ್ಯಾರ್ಥಿಗಳಲ್ಲಿ ಬಿದಿರಿನ ಕುರಿತು ಅರಿವು ಮೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಬಿ.ಎಲ್.ಸನದಿ, ಉದ್ಯಾನಕಾಶಿ ವಿಶೇಷ ಅಧಿಕಾರಿ ರಾಜಶೇಖರ ಪಾಟೀಲ, ದಯಾನಂದ ಅಂಕಲಗಿ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರಾದ ಗುರು ಕುಲಕರ್ಣಿ, ಶೀತಲ ಬ್ಯಾಳಿ, ರಾಚಯ್ಯಾ ಹಿರೇಮಠ, ಮುಖಂಡರಾದ ರಾಜು ಮುನ್ನೋಳಿ, ಪಿಕೆಪಿಎಸ್ ಅಧ್ಯಕ್ಷ ಪುಂಡಲೀಕ ನಂದಗಾವಿ, ಆರ್.ಕರುಣಾಕರ, ನಂದಕಿಶೋರ ಅಜರೇಕರ, ಕಲ್ಲಪ್ಪಾ ತಳವಾರ, ಸಿದ್ದು ಗಡಕೇರಿ, ಮಲ್ಲಪ್ಪಾ ಸಾರವಾಡಿ, ಶ್ರೀಧರ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.ನೀರೆತ್ತಲು ಬಿಡುವುದಿಲ್ಲ-ಕತ್ತಿ ಎಚ್ಚರಿಕೆ
ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ಹರಿಸುವ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಡ್ಯಾಂ ಬಳಿ ಪ್ರತಿಭಟನೆ ಮಾಡಲಾಗುವುದು ಎಂದು ಶಾಸಕ ನಿಖಿಲ್ ಕತ್ತಿ ಎಚ್ಚರಿಸಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯ ನಮ್ಮ ತಾಲೂಕಿನಲ್ಲಿದ್ದು ಇಲ್ಲಿನ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳಿಗೆ ಮೊದಲ ಆದ್ಯತೆಯಾಗಬೇಕು. ಬಳಿಕ ಬೇರೆಡೆ ನೀರು ಹರಿಸಬೇಕು. ಏಕಾಏಕಿ ಬೇರೆಡೆ ನೀರು ಕೊಡಲು ಸಾಧ್ಯವಿಲ್ಲ ಎಂದರು.