₹3 ಕೋಟಿ ವೆಚ್ಚದಲ್ಲಿ ಚೌಡಯ್ಯ ಭವನ ನಿರ್ಮಾಣ: ಶಾಸಕ ಎಂ.ವೈ. ಪಾಟೀಲ್‌

| Published : Jan 22 2024, 02:19 AM IST

₹3 ಕೋಟಿ ವೆಚ್ಚದಲ್ಲಿ ಚೌಡಯ್ಯ ಭವನ ನಿರ್ಮಾಣ: ಶಾಸಕ ಎಂ.ವೈ. ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಿ ಸಮಾಜದ ಸಮುದಾಯ ಭವನವನ್ನು ಅಫಜಲ್ಪುರ ಪಟ್ಟಣದಲ್ಲಿ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಮಣೂರ ಹಾಗೂ ಹೊನ್ನಕೀರಣಗಿ ಗ್ರಾಮಗಳಲ್ಲೂ ತಲಾ 50 ಲಕ್ಷ ವೆಚ್ಚದಲ್ಲಿ ಚೌಡಯ್ಯ ಭವನಗಳನ್ನು ನಿರ್ಮಿಸಲಾಗುತ್ತದೆ: ಶಾಸಕ ಎಂ.ವೈ. ಪಾಟೀಲ್‌

ಕನ್ನಡಪ್ರಭ ವಾರ್ತೆ ಚವಡಾಪುರ

ಶರಣರ ತತ್ವಾದರ್ಶಗಳನ್ನು ಜಯಂತಿ, ಪುಣ್ಯಸ್ಮರಣೆಗಳಲ್ಲಿ ಸ್ಮರಿಸಿದರೆ ಸಾಲದು ಅವರ ತತ್ವಾದರ್ಶಗಳು, ಚಿಂತನೆಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಶರಣರ ಜಯಂತಿ ಆಚರಣೆ ಮಾಡಿದ್ದಕ್ಕೂ ಸಾರ್ಥಕವಾಗಲಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.

ಅಫಜಲ್ಪುರ ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಮೌಢ್ಯ, ಕಂದಾಚಾರಗಳನ್ನು ತೊಡೆದು ಹಾಕಿ ಕಾಯಕ ತತ್ವವನ್ನು ಬಲವಾಗಿ ಪ್ರಚುರ ಪಡಿಸಿದ ಚೌಡಯ್ಯ ಶರಣರು ಅವರ ತತ್ವಾದರ್ಶಗಳಿಂದ ತಲೆತಲಾಂತರ ಶಾಶ್ವತವಾಗಿರಲಿದ್ದಾರೆ ಎಂದ ಅವರು ಕೋಲಿ ಸಮಾಜದ ಸಮುದಾಯ ಭವನವನ್ನು ಅಫಜಲ್ಪುರ ಪಟ್ಟಣದಲ್ಲಿ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಮಣೂರ ಹಾಗೂ ಹೊನ್ನಕೀರಣಗಿ ಗ್ರಾಮಗಳಲ್ಲೂ ತಲಾ 50 ಲಕ್ಷ ವೆಚ್ಚದಲ್ಲಿ ಚೌಡಯ್ಯ ಭವನಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಯುವ ಮುಖಂಡ ರಿತೇಶ ಗುತ್ತೇದಾರ ಮಾತನಾಡಿ, ಎಲ್ಲರೂ ರಾಜಕೀಯ ಮರೆತು ಸಮಾಜಗಳ ಸುಧಾರಣೆಯತ್ತ ದೃಷ್ಟಿ ಇಡಬೇಕಾಗಿದೆ ಅಂದಾಗ ಇಂತಹ ಶರಣರ ಜಯಂತಿಗಳನ್ನು ಆಚರಿಸಿದ್ದಕ್ಕೂ ಸಾರ್ಥಕತೆ ಸಿಗಲಿದೆ ಎಂದರು.

ಮುಖಂಡ ಮಹಾಂತೇಶ ಪಾಟೀಲ್ ಮಾತನಾಡಿ, ಹಿಂದುಳಿದ ವರ್ಗಗಳು ಉದ್ದಾರವಾಗಬೇಕಾದರೆ ಕಾಂತರಾಜ ವರದಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದರು.

ಪ್ರಮುಖರಾದ ಅವ್ವಣ್ಣ ಮ್ಯಾಕೇರಿ, ಶಿವಕುಮಾರ ನಾಟಿಕಾರ, ಮಹಾರಾಯ ಅಗಸಿ, ದಯಾನಂದ ದೊಡ್ಮನಿ, ಬಸವರಾಜ ಚಾಂದಕವಟೆ, ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು.