ಸಮುದಾಯ ಮಂಟಪ ನಿರ್ಮಾಣದಿಂದ ಬಡವರಿಗೆ ಅನುಕೂಲ

| Published : Feb 11 2025, 12:49 AM IST

ಸಾರಾಂಶ

ಹಳ್ಳಿಗಳಲ್ಲಿ ಸಮುದಾಯ ಮಂಟಪ ನಿರ್ಮಾಣದಿಂದ ರೈತರು, ಬಡವರಿಗೆ ಅನುಕೂಲವಾಗಲಿದೆ

ಹರಪನಹಳ್ಳಿ: ಹಳ್ಳಿಗಳಲ್ಲಿ ಸಮುದಾಯ ಮಂಟಪ ನಿರ್ಮಾಣದಿಂದ ರೈತರು, ಬಡವರಿಗೆ ಅನುಕೂಲವಾಗಲಿದೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ತಾಲೂಕು ಕುರುಬ ಸಮಾಜದ ಹಿರಿಯ ಮುಖಂಡ ಎಚ್.ಬಿ. ಪರಶುರಾಮಪ್ಪ ಹೇಳಿದರು.ತಾಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಕುರುಬ ಸಮಾಜದ ವತಿಯಿಂದ ನಿರ್ಮಿಸಿರುವ ನೂತನ ಬೀರಲಿಂಗೇಶ್ವರ ಸಮುದಾಯ ಮಂಟಪವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದಾಗಿ ಇಂತಹ ಸಮುದಾಯ ಮಂಟಪ ನಿರ್ಮಿಸಿರುವುದು ಉತ್ತಮ ಕೆಲಸ, ಇದು ಬಡ ವರ್ಗದ ಜನರಿಗೆ ಉಪಯೋಗವಾಗಲಿ. ಜತೆಗೆ ಸಮಾಜದ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಉನ್ನತಮಟ್ಟಕ್ಕೆ ತಲುಪಲು ಪ್ರೋತ್ಸಾಹಿಸಬೇಕು. ಆಗ ತಮ್ಮ ಕುಟುಂಬ ಅಭಿವೃದ್ಧಿ ಜತೆಗೆ ಗ್ರಾಮವು ಅಭಿವೃದ್ಧಿ ಆಗಲಿದೆ ಎಂದರು.

ಅರೇಮಜ್ಜಿಗೇರಿ ಗ್ರಾಮದ ಮುಖಂಡ ಟಿ.ಬಸವರಾಜ ಮಾತನಾಡಿ, ಸಮಾಜ ಸಂಘಟನೆಯ ಮೂಲಕ ಕೆಲಸ ಮಾಡಿದಾಗ ಮಾತ್ರ ಗ್ರಾಮದಲ್ಲಿ ಇಂತಹ ಅಭಿವೃದ್ಧಿ ಕಾಣಲು ಸಾಧ್ಯ. ಕುರುಬ ಸಮುದಾಯದ ಮೇಲೆ ಇತರ ಸಮುದಾಯಗಳು ನಂಬಿಕೆ, ವಿಶ್ವಾಸ ಇಟ್ಟುಕೊಂಡಿದ್ದು, ಇದನ್ನು ಉಳಿಸಿಕೊಂಡು ಎಲ್ಲರ ಜತೆ ಅನ್ಯೋನ್ಯವಾಗಿ ಬಾಳೋಣ ಎಂದರು.

ವಿಶ್ವಕರ್ಮ ಸಮಾಜದ ಮುಖಂಡ ಆರ್. ಗೋಣೇಪ್ಪ ಮಾತನಾಡಿ, ನಮ್ಮ ಗ್ರಾಮದಲ್ಲಿ ಎಲ್ಲ ಜಾತಿ, ಜನಾಂಗದವರು ಯಾವುದೇ ಭೇದವಿಲ್ಲದೇ ಪ್ರತಿಯೊಂದು ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.

ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ನೀಲಗುಂದ ಸಹಕಾರ ಸಂಘದ ನಿರ್ದೇಶಕರು ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಜಾಗ ಮತ್ತು ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೀರಲಿಂಗೇಶ್ವರಸ್ವಾಮಿಯ ಅದ್ಧೂರಿ ಮೆರವಣಿಗೆ ಮೂಲಕ ಹೊಳೆ ಪೂಜೆ ನೆರವೇರಿತು.

ಬೀರಲಿಂಗೇಶ್ವರ ಸೇವಾ ಸಮಿತಿ ಕಾರ್ಯದರ್ಶಿ ಕರಿಗಾರ ಹುಚ್ಚಪ್ಪ ಕಾರ್ಯಕ್ರಮ ನಿರೂಪಿಸಿದರು. ಬೀರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಡಿ. ಬಸವರಾಜ, ಉಪಾಧ್ಯಕ್ಷ ಬೇಲೂರು ಪರಶುರಾಮ, ಗ್ರಾಪಂ ಸದಸ್ಯರಾದ ನಾಗೇಂದ್ರಪ್ಪ, ದ್ಯಾಮಪ್ಪ, ವಿರೂಪಾಕ್ಷಪ್ಪ, ಕಟಾಣಿ ರಾಜಪ್ಪ, ಎ.ನಿಂಗಪ್ಪ, ನೀಲಗುಂದ ವಿಎಸ್‌ಎಸ್‌ಎನ್ ಅಧ್ಯಕ್ಷ ಬೇಲೂರು ಸಿದ್ದೇಶ, ಉಪಾಧ್ಯಕ್ಷ ಎಂ. ಪರಸಪ್ಪ, ನಿರ್ದೇಶಕರಾದ ಬಿ. ವಾಗೀಶ, ಕೊಟ್ರಗೌಡ, ಜ್ಯೋತೇಶ, ಪರಶುರಾಮ ಎಸ್. ಅರವಿಂದ, ರಮೇಶ, ಬಸವರಾಜ, ಮಲ್ಲಿಕಾರ್ಜುನ ಇದ್ದರು.