ಸಾರಾಂಶ
ಮಂಡ್ಯ ಕುವೆಂಪು ನಗರ ಬಡಾವಣೆಯ ಉದ್ಯಾನವನದಲ್ಲಿ ಅಕ್ರಮವಾಗಿ ಯಾವುದೇ ಕಟ್ಟಡವನ್ನು ನಿರ್ಮಿಸುತ್ತಿಲ್ಲ. ಸಿಎ ಜಾಗದಲ್ಲಿ ಸಮುದಾಯ ಭವನ ಕಾಮಗಾರಿಯನ್ನು ನಡೆಸಲಾಗುತ್ತಿದೆ. ನಗರಸಭೆ ಸದಸ್ಯೆ ವೈ.ಜೆ.ಮೀನಾಕ್ಷಿ ಮಾಡಿರುವುದು ಸುಳ್ಳು ಆರೋಪ.
ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ಕುವೆಂಪು ನಗರ ಬಡಾವಣೆಯ ಉದ್ಯಾನವನದಲ್ಲಿ ಅಕ್ರಮವಾಗಿ ಯಾವುದೇ ಕಟ್ಟಡವನ್ನು ನಿರ್ಮಿಸುತ್ತಿಲ್ಲ. ಸಿಎ ಜಾಗದಲ್ಲಿ ಸಮುದಾಯ ಭವನ ಕಾಮಗಾರಿಯನ್ನು ನಡೆಸಲಾಗುತ್ತಿದೆ. ನಗರಸಭೆ ಸದಸ್ಯೆ ವೈ.ಜೆ.ಮೀನಾಕ್ಷಿ ಮಾಡಿರುವುದು ಸುಳ್ಳು ಆರೋಪ ಎಂದು ಶ್ರೀಪ್ರಶಾಂತ ಬಲಮುರಿ ಗಣಪತಿ ದೇವಾಲಯ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ ಸ್ಪಷ್ಟಪಡಿಸಿದರು.ದೇವಾಲಯದ ಆವರಣವು ಉದ್ಯಾನವನಕ್ಕೆ ಸೇರಿದ್ದು ಎಂದು ಹೇಳಿರುವುದು ತಪ್ಪು ಕಲ್ಪನೆ. ಈ ಸ್ಥಳದಲ್ಲಿ ನಗರಸಭೆ ವಾಣಿಜ್ಯ ಮಳಿಗೆಗಳೂ ಸಹ ಇರುವುದು ಇದಕ್ಕೆ ಸಾಕ್ಷಿ ಎಂದು ಮಂಗಳವಾರ ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.
ಶ್ರೀಪ್ರಶಾಂತ ಬಲಮುರಿ ಗಣಪತಿ ದೇವಾಲಯವು ೨೫ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ರಾಮಣ್ಣ ಅವರ ಏಕಪಕ್ಷೀಯ ನಿರ್ಧಾರಗಳನ್ನು ಸಹಿಸಲಾಗದೆ ಅವರನ್ನು ೫ ವರ್ಷಗಳ ಹಿಂದೆಯೇ ಸಮಿತಿಯಿಂದ ಹೊರಹಾಕಲಾಗಿತ್ತು. ಇದನ್ನು ಸಹಿಸದೆ ನಗರಸಭಾ ಸದಸ್ಯೆ ಮೀನಾಕ್ಷಿ ಅವರ ದಿಕ್ಕು ತಪ್ಪಿಸಿ ಹೇಳಿಕೆ ನೀಡಲಾಗುತ್ತಿದೆ ಎಂದು ದೂರಿದರು.ದೇವಾಲಯದ ಬಳಿಯಲ್ಲಿನ ಕುವೆಂಪು ನಗರ, ಶಂಕರನಗರ, ಕೆಇಬಿ ಕಾಲೋನಿ, ವಿನಾಯಕ ಬಡಾವಣೆ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ಸುಮಾರು ೧೦ ಸಾವಿರ ಭಕ್ತರನ್ನು ಒಳಗೊಂಡ ದೇವಾಲಯದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ವಿಶ್ರಾಂತಿ ತಾಣ, ಗ್ರಂಥಾಲಯ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಸಮುದಾಯ ಭವನ ನಿರ್ಮಿಸಲು ಶಾಸಕ ಪಿ.ರವಿಕುಮಾರ್ ಅವರನ್ನು ಕೋರಿದಾಗ ತಕ್ಷಣವೇ ೫ ಲಕ್ಷ ರು. ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಕ್ಕೆ ಅನು ಮಾಡಿಕೊಟ್ಟಿದ್ದಾರೆ ಎಂದರು.
ದೇವಾಲಯದ ಅಭಿವೃದ್ಧಿ ವಿರೋಧಿಯಾಗಿರುವ ರಾಮಣ್ಣ ಅವರ ನಗರಸಭಾ ಸದಸ್ಯೆಯಿಂದ ಏಕಾಏಕಿ ಉದ್ಯಾನ ಸ್ಥಳದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಅಕ್ರಮ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರ. ದೇವಾಲಯದ ಅಭಿವೃದ್ಧಿ ಸಹಿಸದವರ ಮಾತಿನಿಂದ ಹೇಳಿಕೆ ನೀಡಿದ್ದು, ತಪ್ಪು ಗ್ರಹಿಕೆ ಬದಲಾಯಿಸಿಕೊಂಡು ಭವನದ ನಿರ್ಮಾಣಕ್ಕೆ ನಗರಸಭೆಯಿಂದ ಅನುದಾನ ಕೊಡಿಸುವಂತೆ ಮನವಿ ಮಾಡಿದರು.ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಕೆ.ಪುಟ್ಟಸ್ವಾಮಿಗೌಡ, ಗೌರವ ಅಧ್ಯಕ್ಷ ಶಿವಣ್ಣಗೌಡ, ಉಪಾಧ್ಯಕ್ಷ ನಟರಾಜ್, ಹೊನ್ನಪ್ಪ, ರಾಜೇಗೌಡ, ಹೇಮಂತ್, ಶಿವಕುಮಾರ್ ಇದ್ದರು.