ನರೇಗಾ ಯೋಜನೆಯಡಿ ಸಮುದಾಯ ಒಕ್ಕಲು ಕಣ ನಿರ್ಮಾಣ

| Published : Jan 27 2025, 12:49 AM IST

ಸಾರಾಂಶ

ಶಿರಸಿ ತಾಲೂಕಿನ ಮೇಲಿನ ಓಣಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಗೇಹಳ್ಳಿ ಹಾಗೂ ಮೇಲಿನ ಓಣಿಕೇರಿ ಗ್ರಾಮದಲ್ಲಿ ೨೦೨೩- ೨೪ನೇ ಸಾಲಿನಲ್ಲಿ ತಲಾ ₹೨.೪೦ ಲಕ್ಷ ವೆಚ್ಚದಲ್ಲಿ ಒಕ್ಕಲು ಕಣ ನಿರ್ಮಿಸಲಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ

ಶಿರಸಿ: ರೈತರ ಭತ್ತದ ಬೆಳೆ ಕಟಾವು ಬಂತೆಂದರೆ ಸಾಕು, ಅವರಿಗೆ ಕಣ ಮಾಡುವುದು ಬಹುದೊಡ್ಡ ಸಮಸ್ಯೆ. ಮಳೆಗಾಲದಲ್ಲಿ ಕೊಚ್ಚಿ ಹೋಗುವುದು, ಗಿಡಗಂಟಿ ಬೆಳೆಯುವುದು, ಹುಲ್ಲು ಬೆಳೆಯುವುದೆಲ್ಲ ಸರ್ವೇ ಸಾಮಾನ್ಯ. ಹೀಗಾಗಿ ಪ್ರತಿವರ್ಷವೂ ಬೆಳೆ ಕಟಾವು ವೇಳೆಯಲ್ಲಿ ಕಣ ತಯಾರಿ ಮಾಡುವುದೇ ಒಂದು ಕೆಲಸವಾಗಿ ಬಿಡುತ್ತಿತ್ತು. ಆದರೆ ಇದೀಗ ಈ ಸಮಸ್ಯೆಗೆ ಉದ್ಯೋಗ ಖಾತ್ರಿ ಯೋಜನೆ ಅಂತ್ಯ ಹಾಡಿದೆ.ಜಿಲ್ಲೆ ಬಹುಬೆಳೆಗಳನ್ನು ಬೆಳೆಯುವಂತಹ ನಾಡಗಿದ್ದರೂ ಭತ್ತದ ಬೆಳೆಯಂತೂ ಸರ್ವೇ ಸಾಮಾನ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಕ್ಕಲುತನಕ್ಕೆ ಜಾಗದ ಸಮಸ್ಯೆಯಿಂದಾಗಿ ರೈತರು ಪರದಾಡುವಂತಾಗಿದೆ. ಹೀಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು ₹೨,೪೦,೦೦೦ ಸಹಾಯಧನ ನೀಡಲಾಗುತ್ತಿದ್ದು, ಇದು ಸಮುದಾಯ ಒಕ್ಕಲು ಕಣ ನಿರ್ಮಾಣಕ್ಕೆ ಅನುಕೂಲವಾಗಿದೆ.ಈಗಾಗಲೇ ಶಿರಸಿ ತಾಲೂಕಿನ ಮೇಲಿನ ಓಣಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಗೇಹಳ್ಳಿ ಹಾಗೂ ಮೇಲಿನ ಓಣಿಕೇರಿ ಗ್ರಾಮದಲ್ಲಿ ೨೦೨೩- ೨೪ನೇ ಸಾಲಿನಲ್ಲಿ ತಲಾ ₹೨.೪೦ ಲಕ್ಷ ವೆಚ್ಚದಲ್ಲಿ ಒಕ್ಕಲು ಕಣ ನಿರ್ಮಿಸಲಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.ಮಳೆಗಾಲ ಮುಗಿಯುವ ವೇಳೆಗೆ ಒಕ್ಕಲು ಕಣ ಮಾಡಲು ಭೂಮಿ ತಂಪಾಗಿರುತ್ತಿತ್ತು. ಅಲ್ಲದೇ ಪ್ರತಿವರ್ಷವೂ ನೆಲ ಸಮಗೊಳಿಸಿ ಒಕ್ಕಲುತನ ಮಾಡಲು ವಿಳಂಬವಾಗುತ್ತಿತ್ತು. ಇದೀಗ ಉದ್ಯೋಗ ಖಾತ್ರಿಯಡಿ ನಮಗೆ ಅನುಕೂಲ ಕಲ್ಪಿಸಿದೆ ಎಂದು ಫಲಾನುಭವಿಗಳಾದ ಮಾದೇವ, ಶ್ರೀಧರ್ ಮತ್ತು ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು.ಇನ್ನೂ ಈ ಒಕ್ಕಲು ಕಣ ಸಂಪೂರ್ಣ ಕಾಂಕ್ರಿಟ್‌ಮಯವಾಗಿದ್ದು, ನೀರು ಬೇಗ ಆವಿಯಾಗುವುದುದರ ಜತೆಗೆ ಸುತ್ತಲೂ ಕಟ್ಟೆ ಕಟ್ಟಿರುವುದರಿಂದ ಭತ್ತವು ಸುರಕ್ಷಿತವಾಗಿರುತ್ತದೆ. ಅಲ್ಲದೇ ಭತ್ತದ ಕೊಯ್ಲಿನ ನಂತರ ಅಡಕೆ ಕೊಯ್ಲು ಆರಂಭವಾಗುತ್ತಿದ್ದು, ಅಡಕೆ ಒಣಗಿಸಲು ಹಾಗೂ ಬೇಳೆಕಾಳುಗಳನ್ನು ಒಣಗಿಸಲು ಸಹ ಇಲ್ಲಿನ ಗ್ರಾಮಸ್ಥರಿಗೆ ಅನುಕೂಲವಾಗಿದೆ.

ಗಣಿತ ಜ್ಞಾನ ವೃದ್ಧಿಗೆ ಮಕ್ಕಳ ಸಂತೆ ಪೂರಕ

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಸಂಪೆಕೊಪ್ಪದ ಸ.ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ಕಲಿಕೋತ್ಸವದ ಅಂಗವಾಗಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಪಂ ಸದಸ್ಯ ಗಣಪತಿ ಪಾಟೀಲ ಮಾತನಾಡಿ, ಮಕ್ಕಳಿಗೆ ಈ ಸಂತೆಯಿಂದ ಗಣಿತದ ಕೂಡಿಸುವುದು, ಕಳೆಯುವುದು, ಗುಣಾಕಾರ ಮತ್ತು ಭಾಗಾಕಾರ ಮಾಡುವ ಜ್ಞಾನ ಲಭಿಸುತ್ತದೆ ಎಂದರು.ಮಂಚೀಕೇರಿ ಸಿಆರ್‌ಪಿ ಕೆ.ಆರ್. ನಾಯ್ಕ ಮಾತನಾಡಿ, ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಶೋಕ ಗೌಡ ಮಾತನಾಡಿ, ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ನಡೆಸಲಾರಂಭಿಸಿರುವುದು ಉತ್ತಮ. ನಮ್ಮ ಗ್ರಾಮದ ಮಕ್ಕಳಿಗೆ ಇದರಿಂದ ಜೀವನ ಕೌಶಲ್ಯಗಳ ಅರಿವಾಗಲಿದೆ ಎಂದರು.ಕುಂದರಗಿ ಸಿಆರ್‌ಪಿ ವಿಷ್ಣು ಭಟ್ಟ ಮಾತನಾಡಿ, ಶಾಲೆಯ ಮಕ್ಕಳು ಇಂದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುವ ಸಂತೆಯಂತೆ ಮಾದರಿ ಸಂತೆಯನ್ನು ಸಂಘಟಿಸಿದ್ದಾರೆ. ಇದು ಮಕ್ಕಳ ಕಲಿಕೆಗೆ ಸಹಾಯಕವಾಗಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ್ ಮರಾಠಿ ವಹಿಸಿದ್ದರು. ಗ್ರಾಪಂ ಸದಸ್ಯೆ ದೀಪಾ ಸಿದ್ಧಿ, ಊರಿನ ಹಿರಿಯರಾದ ಚಂದ್ರು ಗೌಡ, ಚಂದ್ರಶೇಖರ ಮರಾಠಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಚಿತ್ರಾ ಸಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅತಿಥಿ ಶಿಕ್ಷಕರಾದ ಪದ್ಮಾ ನಾಯ್ಕ ನಿರ್ವಹಿಸಿದರು. ನಾಗರಾಜ ನಾಯ್ಕ ವಂದಿಸಿದರು.