ರಾಜ್ಯದ ತಾಲೂಕುಗಳಲ್ಲೂ ಅಗ್ನಿಶಾಮಕ ಠಾಣೆ ನಿರ್ಮಾಣ: ಗೃಹ ಸಚಿವ

| Published : Jul 11 2025, 01:47 AM IST

ಸಾರಾಂಶ

ಈಗಾಗಲೇ ರಾಜ್ಯದಲ್ಲಿ 200ಕ್ಕೂ ಹೆಚ್ಚು ಅಗ್ನಿಶಾಮಕ ಠಾಣೆಗಳು ಇದ್ದು ಇನ್ನು 30 -40 ಠಾಣೆಗಳನ್ನು ಹಂತ ಹಂತವಾಗಿದೆ ಮಂಜೂರು ಮಾಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕಂಬಳಪದವು: ಉಳ್ಳಾಲ ಅಗ್ನಿಶಾಮಕ ಠಾಣೆಗೆ ಗೃಹ ಸಚಿವ ಶಂಕು

ಕನ್ನಡಪ್ರಭ ವಾರ್ತೆ ಉಳ್ಳಾಲ

ರಾಷ್ಟೀಯ ಕಮಿಷನ್ ತೀರ್ಮಾನದಂತೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ಇರಬೇಕು ಎಂದು ತೀರ್ಮಾನಿಸಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಠಾಣೆಗಳು ರಾಜ್ಯದಲ್ಲಿ ಇದ್ದು ಇನ್ನು 30 -40 ಠಾಣೆಗಳನ್ನು ಹಂತ ಹಂತವಾಗಿದೆ ಮಂಜೂರು ಮಾಡಲಾಗಿದೆ. ದ.ಕ ಜಿಲ್ಲೆಯ ಕಡಬ ಮತ್ತು ಮೂಲ್ಕಿ ಗೆ ಎರಡು ನೂತನ ಠಾಣೆಗಳು ಮಂಜೂರು ಮಾಡಲಾಗಿದ್ದು ತಲಾ ಮೂರು ಕೋಟಿ ರು.ಗಳಂತೆ ಬಿಡುಗಡೆ ಮಾಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಉಳ್ಳಾಲ ತಾಲೂಕಿನ ಕಂಬಳಪದವು ಬಳಿ ನೂತನ ಅಗ್ನಿಶಾಮಕ ಠಾಣೆಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು‌.

ಅಗ್ನಿಶಾಮಕಕ್ಕೆ ರಾಜ್ಯದಲ್ಲಿ ಹೊಸ ಆವಿಷ್ಕಾರ ಮಾಡಲಾಗಿದೆ. ಬೇರೆ ದೇಶದಿಂದ ಅಮದು ಮಾಡಿ 90 ಮೀಟರ್ ಎತ್ತರದ ಏಣಿ ಬೆಂಗಳೂರಿಗೆ ತರಲಾಗಿದೆ. ಸಿಬ್ಬಂದಿಗೆ ಬೇಕಾಗುವ ವಾಹನಗಳನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದು ವಾಹನಗಳಿಗೆ ಮುಖ್ಯಮಂತ್ರಿ 50 ಕೋಟಿ ರು. ಬಿಡುಗಡೆ ಮಾಡಿದ್ದಾರೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದ‌ರ್, ಉಳ್ಳಾಲ ತಾಲೂಕು ಆಗಿ ಘೋಷಣೆ ಅದ ಬಳಿಕ ವಿವಿಧ ಇಲಾಖೆಗಳ ಶಾಖೆ ಹಂತ ಹಂತವಾಗಿ ಬರುತ್ತಿದೆ. ರಾಜ್ಯಕ್ಕೆ ಮಾದರಿ ಅಗ್ನಿಶಾಮಕ ಕಚೇರಿ ಉಳ್ಳಾಲದಲ್ಲಿ ನಿರ್ಮಾಣ ಮಾಡಲಾಗುವುದು. ಮುಂದೆ ಕೊಣಾಜೆ ಪೊಲೀಸ್ ಠಾಣೆ ಮಾದರಿ ಆಗಿ ನಿರ್ಮಾಣ ಮಾಡುವ ಗುರಿ ಇದೆ ಎಂದರು.

ಅಗ್ನಿಶಾಮಕ ಇಲಾಖೆಯ ಉಪ ನಿರ್ದೇಶಕ ಈಶ್ವರ ನಾಯಕ್‌, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಫಜೀರು ಪಂಚಾಯಿತಿ ಅಧ್ಯಕ್ಷ ರಫೀಕ್ ಪಜೀರು, ಮುನ್ನೂರು ಪಂಚಾಯಿತಿ ಅಧ್ಯಕ್ಷೆ ರೆಹನಾ ಬಾನು, ಮಂಜನಾಡಿ ಗ್ರಾಪಂ ಅಧ್ಯಕ್ಷೆ ಸರೋಜಿನಿ, ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ದಾಮೋದ‌ರ್ ಕುಂದ‌ರ್, ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಗೀತಾ ಭಂಡಾರಿ, ಕುರ್ನಾಡು ಗ್ರಾಪಂ ಅಧ್ಯಕ್ಷೆ ಪ್ರೇಮಾ ಗಟ್ಟಿ, ಕುರ್ನಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೆರ, ರಮೇಶ್ ಶೆಟ್ಟಿ, ಮುಖಂಡರಾದ ಸೀತಾರಾಂ ಶೆಟ್ಟಿ ಪೆರ್ನ, ಜೆ.ಬಾವ, ಕಣಚೂರು ಮೋನು, ಹರ್ಷರಾಜ್ ಮುದ್ಯ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಅಗ್ನಿಶಾಮಕ ಅಧಿಕಾರಿ ತಿರುಮಲೇಶ್ ಸ್ವಾಗತಿಸಿದರು. ಡಾ.ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಫಜೀರು ಗ್ರಾ.ಪಂ. ಅಧ್ಯಕ್ಷ ಮೊಹಮ್ಮದ್‌ ರಫೀಕ್‌ ವಂದಿಸಿದರು.