ಸಾರಾಂಶ
ಚತುಷ್ಪಥ ಹೆದ್ದಾರಿ ರಸ್ತೆ ನಿರ್ಮಿಸುವ ಸಂಬಂಧ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಮಳವಳ್ಳಿ ಪಟ್ಟಣದ ಕುಡಿಯುವ ನೀರಿಗೆ ೭೦ ಕೋಟಿ ರು. ಅನುದಾನ ನೀಡಲಾಗಿದೆ. ಮಳವಳ್ಳಿ ಒಳಚರಂಡಿ ಕಾಮಗಾರಿಗೆ ೧೦ ಕೋಟಿ ರು. ಅನುದಾನ ಬಿಡುಗಡೆ, ಶ್ರೀರಂಗಪಟ್ಟಣದ ಒಳಚರಂಡಿ ಕಾಮಗಾರಿಗೆ ೨೫ ಕೋಟಿ ಮೀಸಲಿಟ್ಟಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿಮಳವಳ್ಳಿ-ಮೈಸೂರು ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಶಾಸಕ ನರೇಂದ್ರಸ್ವಾಮಿ ಬೇಡಿಕೆಗೆ ಸಚಿವರು ಸಭೆಯಲ್ಲೇ ಸ್ಪಂದಿಸಿದರು.ಚತುಷ್ಪಥ ಹೆದ್ದಾರಿ ರಸ್ತೆ ನಿರ್ಮಿಸುವ ಸಂಬಂಧ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ನರೇಂದ್ರಸ್ವಾಮಿ ಅವರ ಬೇಡಿಕೆ ಈಡೇರಿಸಲು ಬದ್ಧನಾಗಿದ್ದು, ಈ ವರ್ಷ ಅಥವಾ ಮುಂದಿನ ವರ್ಷ ಎಲ್ಲಾ ಮನವಿಗೆ ಸ್ಪಂದಿಸುವುದಾಗಿ ಹೇಳಿದರು.
ನಗರಾಭಿವೃದ್ಧಿ ಸಚಿವ ಸಚಿವ ಭೈರತಿ ಸುರೇಶ್ ಮಾತನಾಡಿ, ಈಗಾಗಲೇ ಮಳವಳ್ಳಿ ಪಟ್ಟಣದ ಕುಡಿಯುವ ನೀರಿಗೆ ೭೦ ಕೋಟಿ ರು. ಅನುದಾನ ನೀಡಲಾಗಿದೆ. ಮಳವಳ್ಳಿ ಒಳಚರಂಡಿ ಕಾಮಗಾರಿಗೆ ೧೦ ಕೋಟಿ ರು. ಅನುದಾನ ಬಿಡುಗಡೆ, ಶ್ರೀರಂಗಪಟ್ಟಣದ ಒಳಚರಂಡಿ ಕಾಮಗಾರಿಗೆ ೨೫ ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದರು.ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಶ್ರಮ ವಹಿಸುತ್ತಿದ್ದೇವೆ. ಎಲ್ಲ ಸಮಾಜದವರು ಒಪ್ಪುವಂತಹ ಏಕೈಕ ನಾಯಕ ಸಿದ್ದರಾಮಯ್ಯ. ಮುಂದಿನ ದಿನಗಳಲ್ಲಿ ವಿಧಾನಸಭೆಯಂತೆ ಲೋಕಸಭೆಯಲ್ಲೂ ಕಾಂಗ್ರೆಸ್ ಪಕ್ಷವನ್ನ ಆಶೀರ್ವದಿಸಿ. ಲೋಕಸಭೆಯಲ್ಲಿ ಜನರು ನಮ್ಮ ಕೈ ಹಿಡಿದರೆ ನಿಮ್ಮ ಕೈಯನ್ನು ನಾವು ಯಾವತ್ತೂ ಬಿಡುವುದಿಲ್ಲ. ಸದಾ ನಿಮ್ಮ ಸೇವೆಗೆ ಸಿದ್ಧರಿರುತ್ತೇವೆ ಎಂದು ನುಡಿದರು.