ಶೀಘ್ರದಲ್ಲೇ ಗಾಂಧೀ ಪ್ರತಿಮೆ ನಿರ್ಮಾಣ

| Published : Oct 03 2024, 01:17 AM IST

ಸಾರಾಂಶ

ತಿಪಟೂರು: ಮಹಾತ್ಮ ಗಾಂಧೀಜಿ ೧೯೨೭ರಲ್ಲಿ ತಿಪಟೂರಿನ ಈ ಜಾಗಕ್ಕೆ ಬಂದು ಒಂದು ದಿನ ತಂಗಿದ್ದಾಗ ಏನು ಕನಸನ್ನು ಕಂಡಿದ್ದರೋ ಅದನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ನನ್ನ ಹಾಗೂ ನಿಮ್ಮೆಲ್ಲರ ಪ್ರಯತ್ನ ಸಾಗಬೇಕಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಿಪಟೂರು: ಮಹಾತ್ಮ ಗಾಂಧೀಜಿ ೧೯೨೭ರಲ್ಲಿ ತಿಪಟೂರಿನ ಈ ಜಾಗಕ್ಕೆ ಬಂದು ಒಂದು ದಿನ ತಂಗಿದ್ದಾಗ ಏನು ಕನಸನ್ನು ಕಂಡಿದ್ದರೋ ಅದನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ನನ್ನ ಹಾಗೂ ನಿಮ್ಮೆಲ್ಲರ ಪ್ರಯತ್ನ ಸಾಗಬೇಕಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ರೈಲ್ವೆ ನಿಲ್ಧಾಣದ ಬಳಿ ಇರುವ ಗಾಂಧಿ ಭವನದ ಆವರಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ನಡೆದ ಮಹಾತ್ಮಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ಶಾಸ್ತ್ರಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ಅಂದು ಗಾಂಧಿ ತಂಗಿದ ಮನೆ ಪಾಳುಬಿದ್ದು ಅನಾಥವಾಗಿತ್ತು. ನಾನು ಶಾಸಕನಾದಾಗ ಮಾಡಿದ ಮೊದಲನೇ ಕೆಲಸ ಗಾಂಧಿ ತಂಗಿದ್ದ ಈ ಜಾಗವನ್ನು ಸ್ಮಾರಕವಾಗಿಸುವುದೇ ಆಗಿತ್ತು. ಅದರಂತೆ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿ ಕೆಲಸ ಪ್ರಾರಂಬಿಸುವಂತೆ ತಿಳಿಸಿದ ಮೇಲೆ ಈ ಪುಣ್ಯ ಸ್ಥಳ ಇಂದು ತಿಪಟೂರಿನ ಸಾಬರಮತಿ ಆಗಿ ಕಂಗೊಳಿಸುತ್ತಿದೆ ಎಂದರು.ಈ ಭವನದ ಮುಂದೆ ಗಾಂಧಿ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಈಗಾಗಲೇ ಗಾಂಧಿ ಭವನದ ಒಳಗೆ ಗಾಂಧೀಜಿ ನಡೆದು ಬಂದ ಹಾದಿಯ ಚಿತ್ರಣವನ್ನು ಮೂಡಿಸಲಾಗಿದೆ. ಅವರ ಅನೇಕ ಪುಸ್ತಕಗಳ ಗ್ರಂಥಾಲಯ ಹಾಗೂ ಓದುವ ಕೊಠಡಿ ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಬಸವಣ್ಣ ಹಾಗೂ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಿಸಿ ಅವರ ವಿಚಾರಧಾರೆಗಳನ್ನೂ ಪ್ರಸ್ತುತಪಡಿಸಲು ನಿಶ್ಚಯಿಸಿದ್ದೇನೆ. ಮುಂದಿನ ಪೀಳಿಗೆಗೆ ಗಾಂಧೀ, ಬಸವಣ್ಣ, ಅಂಬೇಡ್ಕರ್ ವಿಚಾರಧಾರೆಯನ್ನು ತಿಳಿಸಲು ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗುವುದು. ಶಾಲಾ ಮಕ್ಕಳು ಇಲ್ಲಿಗೆ ಭೇಟಿ ನೀಡಿ ಮಹಾತ್ಮರ ವಿಚಾರಧಾರೆಗಳನ್ನು ತಿಳಿದುಕೊಳ್ಳಲು ಪ್ರತಿ ಶನಿವಾರ ಶಾಲಾಮಕ್ಕಳ ಭೇಟಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ ಮಹಾತ್ಮ ಗಾಂಧೀಜಿ ಹೋರಾಟ ಸ್ವಾತಂತ್ರ ಹೋರಾಟಕ್ಕಷ್ಟೇ ಸೀಮಿತವಾಗಿರಲಿಲ್ಲ. ಸತ್ಯ, ಅಹಿಂಸೆ ಹಾಗೂ ಗ್ರಾಮ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದರು. ಅವರ ಈ ಎಲ್ಲ ಕೆಲಸದಿಂದ ಭಾರತ ಅಭಿವೃದ್ಧಿ ಪಥದತ್ತ ಸಾಗಿದೆ ಎಂದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ ಗಾಂಧೀಜಿಯವರು ಯಾವಾಗಲೂ ಸ್ವಚ್ಛತೆಗೆ ಆಧ್ಯತೆ ನೀಡುತ್ತಿದ್ದರು. ನಗರಸಭೆ ವತಿಯಿಂದ ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು ಅಭಿಯಾನವನ್ನು ಪ್ರಾರಂಭಿಸಿ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಮಾಡಲಾಗುವುದು ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ , ನಗರಸಭಾ ಸದಸ್ಯರಾದ ತರಕಾರಿ ಪ್ರಕಾಶ್, ಯೋಗೀಶ್, ಅಶ್ವಿನಿದೇವರಾಜು, ಊರ್‌ಭಾನು, ಆಸಿಫಾಭಾನು ಮುಖಂಡರಾದ ಲೋಕನಾಥಸಿಂಗ್, ನಂದಿನಿ, ವಕೀಲರ ಸಂಘದ ಅಧ್ಯಕ್ಷ ಬಿ.ಎನ್.ಅಜಯ್, ಬಗರ್‌ಹುಕುಂ ನಿರ್ದೇಶಕಿ ರಶ್ಮಿ ಇನ್ನಿತರರು ಉಪಸ್ಥಿತರಿದ್ದರು.