ರಾಜ್ಯದಲ್ಲಿ ₹200 ಕೋಟಿ ವೆಚ್ಚದಲ್ಲಿ ಹಾಸ್ಟೆಲ್‌ಗಳ ನಿರ್ಮಾಣ : ಕೆಂಚಪ್ಪಗೌಡ

| Published : Sep 06 2025, 01:00 AM IST

ರಾಜ್ಯದಲ್ಲಿ ₹200 ಕೋಟಿ ವೆಚ್ಚದಲ್ಲಿ ಹಾಸ್ಟೆಲ್‌ಗಳ ನಿರ್ಮಾಣ : ಕೆಂಚಪ್ಪಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ರಾಜ್ಯ ಒಕ್ಕಲಿಗರ ಸಂಘದಿಂದ ರಾಜ್ಯದ ವಿವಿಧೆಡೆ ₹200 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ 8 ಹಾಸ್ಟೆಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಹೊಸದಾಗಿ ₹200 ಕೋಟಿ ವೆಚ್ಚದಲ್ಲಿ ವಿವಿಧ ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಕೆಂಚಪ್ಪಗೌಡ ಹೇಳಿದರು.

- ತೇಗೂರು ಬಳಿ ₹10.20 ಕೋಟಿ ವೆಚ್ಚದ ಹಾಸ್ಟೆಲ್‌ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜ್ಯ ಒಕ್ಕಲಿಗರ ಸಂಘದಿಂದ ರಾಜ್ಯದ ವಿವಿಧೆಡೆ ₹200 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ 8 ಹಾಸ್ಟೆಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಹೊಸದಾಗಿ ₹200 ಕೋಟಿ ವೆಚ್ಚದಲ್ಲಿ ವಿವಿಧ ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಕೆಂಚಪ್ಪಗೌಡ ಹೇಳಿದರು. ತೇಗೂರು ಗ್ರಾಮದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ₹10.20 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿದ್ಯಾರ್ಥಿನಿಯರ ನೂತನ ಹಾಸ್ಟೆಲ್ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 12 ವರ್ಷಗಳಿಂದ ಸಂಘದಿಂದ ಯಾವುದೇ ನೂತನ ಹಾಸ್ಟೆಲ್ ಕಟ್ಟಡ ನಿರ್ಮಾಣ ಆಗಿರಲಿಲ್ಲ. ಒಂದು ತಿಂಗಳಿನಿಂದ ಈಚೆಗೆ ಸುಮಾರು ₹200 ಕೋಟಿ ವೆಚ್ಚದಲ್ಲಿ 8 ಕಟ್ಟಡಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದಲ್ಲದೆ ಇನ್ನೊಂದು ತಿಂಗಳಲ್ಲಿ ಸುಳ್ಯ, ಕೋಲಾರ, ತುಮಕೂರು, ಸೋಮವಾರಪೇಟೆ ಹೀಗೆ ಹಲವಾರು ಕಡೆಗಳಲ್ಲಿ ಹಾಸ್ಟಲ್‌ಗಳನ್ನು ನಿರ್ಮಿಸಲಾಗುವುದು ಇದಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯ ಒಕ್ಕಲಿಗರ ಸಂಘದ ಹಾಸ್ಟೆಲ್, ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು, ಸಮುದಾಯ ಭವನ ಗಳನ್ನು ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಚಿಕ್ಕಮಗಳೂರು ನಗರದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ರಾಜ್ಯ ಸಂಘದ ನಿರ್ದೇಶಕ ಎ.ಪೂರ್ಣೇಶ್ ಅವರ ಆಸಕ್ತಿ ಹಾಗೂ ಒತ್ತಡ ಇದಕ್ಕೆ ಕಾರಣ. ಮುಂದಿನ ಒಂದು ವರ್ಷದೊಳಗೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ, ರಾಜ್ಯ ಸಂಘವು 1906 ರಲ್ಲಿ ಸ್ಥಾಪನೆ ಗೊಂಡಿದ್ದರು ಇಷ್ಟೊಂದು ಆರ್ಥಿಕವಾಗಿ ಎಂದಿಗೂ ಸದೃಢವಾಗಿರಲಿಲ್ಲ. 2022 ರಿಂದ ಕೆಂಚಪ್ಪಗೌಡ ಅಧ್ಯಕ್ಷತೆಯಲ್ಲಿ ಅಸ್ಥಿತ್ವಕ್ಕೆ ಬಂದ ಸಂಘ ಈವರೆಗೆ ಸುಳ್ಯ, ಸೋಮವಾರಪೇಟೆ, ಬನಶಂಕರಿಯಲ್ಲಿ ಜಾಗ ಮತ್ತು ಕಟ್ಟಡ ಖರೀದಿಸಿದೆ. ಕೋಲಾರ ತುಮಕೂರು, ಹಾಸನ ಮತ್ತು ಚನ್ನಪಟ್ಟಣದಲ್ಲಿ 4 ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಹೊಸದಾಗಿ 2 ನರ್ಸಿಂಗ್ ಕಾಲೇಜು, ಒಂದು ಆಯುರ್ವೇದ ಕಾಲೇಜು, ಪ್ಯಾರಾ ಮೆಡಿಕಲ್ ಕಾಲೇಜು ನಿರ್ಮಿಸಲಾಗಿದೆ. ರಾಜ್ಯದ ವಿವಿಧೆಡೆ ಸಂಘದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದೆ ಬಾಲಕರ ವಿದ್ಯಾರ್ಥಿ ನಿಲಯಗಳನ್ನು ಸಹ ಆರಂಭಿಸಲಾಗುವುದು ಎಂದು ವಿವರಿಸಿದರು.

ಕಾಂತರಾಜು ಆಯೋಗ ನೀಡಿರುವ ವರದಿ ಜಾರಿಗೆ ಬಂದಿದ್ದರೆ ಒಕ್ಕಲಿಗರ ಮಕ್ಕಳಿಗೆ ಸರ್ಕಾರಿ ಉದ್ಯೋಗ ಗಗನ ಕುಸುಮ ವಾಗುತ್ತಿತ್ತು. ಅದನ್ನ ಕೈಬಿಡುವಂತೆ ರಾಜ್ಯ ಸಂಘ ಮಾಡಿದ ಪ್ರಯತ್ನ ಯಶಸ್ವಿಯಾಗಿದೆ. ಈಗ ಸರ್ಕಾರ ಹಿಂದುಳಿದ ವರ್ಗಗಳ ಆಯೋಗವನ್ನ ನೇಮಕ ಮಾಡಿದೆ. ಇದೇ ತಿಂಗಳ 22 ರಿಂದ ಸಮೀಕ್ಷೆ ಪ್ರಾರಂಭ ಮಾಡಲಿದೆ. ಈ ವೇಳೆ ಮೀಸಲಾತಿ ಉಳಿಸುವ ಸಲುವಾಗಿ ಪ್ರತಿಯೊಬ್ಬರೂ ವಾಸ್ತವಾಂಶ ತಿಳಿಸಿ ಜಾತಿ ಪಟ್ಟಿಯಲ್ಲಿ ಉಳಿದುಕೊಳ್ಳಬೇಕು. ಎಲ್ಲಾ ವಿಷಯದಲ್ಲೂ ಮೀಸಲಾತಿ ಅಡಿ ಉಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ನಮ್ಮ ಜಿಲ್ಲೆಯ ಜನಾಂಗದ ಕೆಲಸಕ್ಕೆ ರಾಜ್ಯ ಸಂಘದ ಎಲ್ಲಾ ೩೫ ನಿರ್ದೇಶಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದ್ದಾರೆ. ಇದರ ಪರಿಣಾಮ ಹಲವಾರು ಅಡೆ ತಡೆ ನಿವಾರಿಸಿದ್ದು ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ ಸಾಧ್ಯವಾಗುತ್ತಿದೆ ಎಂದರು.ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನಿಲಗೆರೆ ಬಾಲಣ್ಣ, ಉಪಾಧ್ಯಕ್ಷ ಎಲ್.ಶ್ರೀನಿವಾಸ್, ರೇಣುಕಾ ಪ್ರಸಾದ್, ಹನುಮಂತಯ್ಯ, ನಿರ್ದೇಶಕರಾದ ಎ. ಪೂರ್ಣೇಶ್‌, ಗಂಗಾಧರ್, ಧರ್ಮೇಶ್, ಮಹಾಲಿಂಗೇಗೌಡ ಹಾಜರಿದ್ದರು. 5 ಕೆಸಿಕೆಎಂ 2ಚಿಕ್ಕಮಗಳೂರು ನಗರ ಸಮೀಪದ ತೇಗೂರು ಗ್ರಾಮದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ನಿರ್ಮಾಣ ಮಾಡಲಾಗುತ್ತಿರುವ ವಿದ್ಯಾರ್ಥಿನಿಯರ ನೂತನ ಹಾಸ್ಟೆಲ್ ಕಟ್ಟಡದ ಕಾಮಗಾರಿಗೆ ರಾಜ್ಯಾಧ್ಯಕ್ಷ ಕೆಂಚಪ್ಪಗೌಡ ಶಂಕುಸ್ಥಾಪನೆ ನೆರವೇರಿಸಿದರು.