ಈ ಮೂರು ಮಹತ್ವದ ಯೋಜನೆಗಳನ್ನು ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಸುಮಾರು 10 ರಿಂದ 15 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳ್ಳಲಿದೆ. ದೇಶದ ವಿವಿಧ ಭಾಗಗಳ ಕಲಾವಿದರು ಹಾಗೂ ಸಂಗೀತಾಸಕ್ತರಿಂದ ಸಹಕಾರ ದೊರೆಯುವ ವಿಶ್ವಾಸವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಣಿಯನಹುಂಡಿಯಲ್ಲಿ ಜಾನಕಿ ಅವರ ಸ್ಮರಣಾರ್ಥ ಜಾನಕಿ ಧ್ಯಾನ ಮಂಟಪ, ಕೃಷ್ಣ ಮಂಟಪ ಹಾಗೂ ಜಾನಕಿ ಅಧ್ಯಯನ ಪೀಠ ನಿರ್ಮಿಸುವುದಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ನಗರದ ದಟ್ಟಗಳ್ಳಿಯ ಸಾ.ರಾ. ಕಲ್ಯಾಣ ಮಂಟಪದಲ್ಲಿ ಹಿರಿಯ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಎಸ್. ಜಾನಕಿ ಚಾರಿಟಬಲ್ ಟ್ರಸ್ಟ್ ಬುಧವಾರ ಆಯೋಜಿಸಿದ್ದ ಜಾನಕಿ ನಮನ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಕಿ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯುವ ಆಸೆ ಹೊಂದಿದ್ದರು. ಇದೀಗ ಅವರ ಆಶಯದಂತೆ ಮೈಸೂರಿನಲ್ಲಿ ನಿರ್ಮಾಣವಾಗಿರುವ ಸ್ಮಾರಕಕ್ಕೆ ‘ಜಾನಕಿ ಧ್ಯಾನ ಮಂಟಪ’ ಎಂದು ಹೆಸರಿಡಲಾಗುತ್ತದೆ. ಜಾನಕಿ ಅವರ ಆರಾಧ್ಯ ದೈವ ಶ್ರೀಕೃಷ್ಣನ ಸ್ಮರಣಾರ್ಥ ಧ್ಯಾನ ಮಂಟಪದ ಆವರಣದಲ್ಲಿ ‘ಕೃಷ್ಣ ಕಲ್ಯಾಣ’ ಹೆಸರಿನ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಇದರೊಂದಿಗೆ ಸಂಗೀತ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಜಾನಕಿ ಅಧ್ಯಯನ ಪೀಠ’ ಸ್ಥಾಪಿಸುವುದಾಗಿ ಅವರು ಹೇಳಿದರು.

ಈ ಮೂರು ಮಹತ್ವದ ಯೋಜನೆಗಳನ್ನು ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಸುಮಾರು 10 ರಿಂದ 15 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳ್ಳಲಿದೆ. ದೇಶದ ವಿವಿಧ ಭಾಗಗಳ ಕಲಾವಿದರು ಹಾಗೂ ಸಂಗೀತಾಸಕ್ತರಿಂದ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು.

ಯೋಜನೆಗೆ ಚಾಲನೆ ನೀಡುವ ಉದ್ದೇಶದಿಂದ ಕರ್ನಾಟಕ ಸಂಗೀತ ಸಂಘದಿಂದ 5 ಲಕ್ಷ ರೂ. ಹಾಗೂ ರಾಜ್ ಈವೆಂಟ್ಸ್ ವತಿಯಿಂದ ಮತ್ತೊಂದು 5 ಲಕ್ಷ ದೇಣಿಗೆ ಘೋಷಿಸಲಾಗಿದ್ದು, ಇದು ಮೊದಲ ಹೆಜ್ಜೆ. ಮುಂದಿನ ಎರಡು ವರ್ಷಗಳಲ್ಲಿ ಜಾನಕಿ ಧ್ಯಾನ ಮಂಟಪ ಮತ್ತು ಅಧ್ಯಯನ ಪೀಠವು ವಿಶ್ವದ ಸಂಗೀತಜ್ಞರು, ಸಂಶೋಧಕರು ಹಾಗೂ ಕಲಾವಿದರು ಭೇಟಿ ನೀಡುವ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ದೀಪ ಬೆಳಗಿದಾಗ ಅದನ್ನು ಜ್ಞಾನಜ್ಯೋತಿ ಎಂದು ಕರೆಯಲಾಗುತ್ತದೆ. ಆದರೆ ಜಾನಕಿ ಅವರ ನೆನಪಿಗಾಗಿ ಬೆಳಗಿದ ದೀಪವು ಜ್ಞಾನಜ್ಯೋತಿಯ ಜೊತೆಗೆ ಗಾನಜ್ಯೋತಿಯೂ ಆಗಿದೆ. ಜಾನಕಿ ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಕರೆ ನೀಡಿದ ಕೂಡಲೇ ವಾದ್ಯಗೋಷ್ಠಿ, ಗಾಯಕ- ಗಾಯಕಿಯರು ಹಾಗೂ ಕಲಾವಿದರು ಯಾವುದೇ ಹಿಂಜರಿಕೆ ಇಲ್ಲದೆ ಭಾಗವಹಿಸಲು ಒಪ್ಪಿಕೊಂಡಿರುವುದು ಜಾನಕಿ ಅವರ ಮೇಲಿನ ಅಪಾರ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿ ಎಂದರು.

ಎಸ್‌. ಜಾನಕಿ ಅವರ ಸೊಸೆ ಉಮಾ ಮುರುಳಿ ಮಾತನಾಡಿ, ಜಾನಕಮ್ಮ ಅವರು ಪ್ರತಿಯೊಬ್ಬರಲ್ಲಿಯೂ ಜೀವಂತವಾಗಿ ಇದ್ದಾರೆ. ಅವರ ನೆನಪು ಪ್ರತಿಯೊಬ್ಬರಲ್ಲಿಯೂ ಉಳಿಯುತ್ತದೆ. ಕಳೆದ ಕೆಲವು ದಿನಗಳು ನಮಗೆ ನೋವಿನ ಜೊತೆಗೆ ಆತ್ಮಸ್ಥೈರ್ಯವನ್ನೂ ನೀಡಿದ ಅನುಭವವಾಗಿತ್ತು. ನನ್ನ ಭಾವನೆ ವ್ಯಕ್ತಪಡಿಸಲು ಪದಗಳೇ ಸಾಲದು. ಅತ್ತೆಯ ಆರೈಕೆ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ನವೀನ್, ಅನಿಲ್, ಅರುಣ್, ಶಿವು ಸೇರಿದಂತೆ ಎಲ್ಲಾ ಸ್ನೇಹಿತರಿಗೆ ಅವರು ವಿಶೇಷ ಕೃತಜ್ಞತೆ ಸಲ್ಲಿಸಿದರು.

ಮೊಮ್ಮಗಳು ಅಪ್ಸರಾ ಮಾತನಾಡಿ, ಜಗತ್ತಿಗೆ ಅವರು ಜಾನಕಮ್ಮ ಆಗಿದ್ದರು. ನನಗೂ ನನ್ನ ಸಹೋದರಿಗೂ ಅವರು ಅಜ್ಜಿ ಮಾತ್ರ. ನಮ್ಮ ಪಾಲಿಗೆ ಅವರು ಎಂದಿಗೂ ಖ್ಯಾತ ಗಾಯಕಿಯಾಗಿರಲಿಲ್ಲ. ಪ್ರೀತಿಯ ಅಜ್ಜಿಯಾಗಿದ್ದರು. ಅವರ ವ್ಯಕ್ತಿತ್ವವನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಅವರು ದೈವಿಕ ವ್ಯಕ್ತಿತ್ವ ಹೊಂದಿದ್ದವರು. ಅವರ ಪ್ರೀತಿ, ಮಮತೆ ಮತ್ತು ಆಶೀರ್ವಾದ ಸದಾ ನಮ್ಮೊಂದಿಗೆ ಇರುತ್ತದೆ. ಅವರು ದೇಹತಃ ನಮ್ಮೊಂದಿಗಿಲ್ಲದಿದ್ದರೂ, ಅವರ ನೆನಪು ಮತ್ತು ಮೌಲ್ಯಗಳು ಎಂದೆಂದಿಗೂ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತವೆ ಎಂದರು.

ಮಾಜಿ ಸಚಿವ ಸಾ.ರಾ.ಮಹೇಶ್‌, ಮಾಜಿ ಸಂಸದ ಪ್ರತಾಪ ಸಿಂಹ, ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ನಟಿ ಭಾರತಿ ವಿಷ್ಣುವರ್ಧನ್, ಗಾಯಕಿ ಅನುರಾಧ ಭಟ್, ವಾಣಿ ಹರಿಕೃಷ್ಣ, ಅರ್ಚನಾ ಉಡುಪ, ಶಶಿಕಲಾ, ಇಂದು ನಾಗರಾಜ್, ಮೋಹನ್‌ ಕೃಷ್ಣ, ದರ್ಶನ್ ಮೆಳವಂಕಿ, ಪೃಥ್ವಿಭಟ್, ಕಂಬದ ರಂಗಯ್ಯ, ವ್ಯಾಸರಾಯ್ ಸೋಸಲೆ, ಅಜಯ್ ವಾರಿಯರ್, ಶೈಲಜಾ ಸುದರ್ಶನ್, ಆರ್.ಪಿ. ಪಟ್ನಾಯಕ್, ಮಳವಳ್ಳಿ ಮಹದೇವಸ್ವಾಮಿ, ಬ್ರಹ್ಮಾಂಡ ಗುರೂಜಿ, ಟ್ರಸ್ಟ್‌ ಅಧ್ಯಕ್ಷ ನವೀನ್, ಉಪಾಧ್ಯಕ್ಷ ಪವನ್‌ ಕುಮಾರ್, ಪದಾಧಿಕಾರಿಗಳಾದ ಶಿವಕುಮಾರ್, ಸಿದ್ದರಾಜ್, ಅರುಣ್ ಸಾಗರ್ ಮೊದಲಾದವರು ಇದ್ದರು.