ಕುಳಾಯಿ ಮೀನುಗಾರಿಕಾ ಜೆಟ್ಟಿ ಕಾಮಗಾರಿ ತ್ವರಿತಕ್ಕೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ

| Published : Jan 25 2024, 02:02 AM IST / Updated: Jan 25 2024, 02:03 AM IST

ಕುಳಾಯಿ ಮೀನುಗಾರಿಕಾ ಜೆಟ್ಟಿ ಕಾಮಗಾರಿ ತ್ವರಿತಕ್ಕೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೀನುಗಾರಿಕೆಗೆ ಪೂರಕವಾಗುವಂತೆ ಜೆಟ್ಟಿನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗ ಉತ್ತಮವಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಇದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಗರ್‌ಮಾಲಾ ಯೋಜನೆಯಡಿ ಮೀನುಗಾರಿಕಾ ಕುಳಾಯಿ ಜೆಟ್ಟಿ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ, ಕಾಮಗಾರಿ ಪರಿಶೀಲನೆ ನಡೆಸಿದರಲ್ಲದೆ, ಸ್ಥಳೀಯ ಮೀನುಗಾರರ ಅಹವಾಲು ಆಲಿಸಿದರು. ಈ ಸಂದರ್ಭ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ಮಂಗಳೂರಿನ ಮೊದಲ ಬಂದರು ಉದ್ಘಾಟನೆ ವೇಳೆ ಕುಳಾಯಿಯಲ್ಲಿ ಬಂದರು ಸಂತ್ರಸ್ತರಿಗೆ ಪ್ರತ್ಯೇಕ ಜೆಟ್ಟಿ ನಿರ್ಮಿಸುವ ಭರವಸೆ ನೀಡಿದ್ದರು. ಬಳಿಕ ನಾನಾ ಕಾರಣಗಳಿಗೆ ಅದು ವಿಳಂಬವಾಗಿತ್ತು. ಈಗ ಕಾಮಗಾರಿ ಭರದಿಂದ ನಡೆಯುತ್ತಿದೆ. ಮೀನುಗಾರಿಕೆಗೆ ಪೂರಕವಾಗುವಂತೆ ಜೆಟ್ಟಿನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗ ಉತ್ತಮವಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಇದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಕೇಂದ್ರ ಸರ್ಕಾರದ ಶೇ.50 ಅನುದಾನ ಅಂದರೆ 98.255 ಕೋಟಿ ರು., ಬಂದರು ಇಲಾಖೆಯ ಶೇ.45 ಅನುದಾನ ಅಂದರೆ 88.43 ಕೋಟಿ ರು. ಶೇ.5 ಅನುದಾನ ರಾಜ್ಯ ಸರ್ಕಾರ ಅಂದರೆ 9.85 ಕೋಟಿ ರು. ಸೇರಿ ಒಟ್ಟು 196.51 ಕೋಟಿ ರು. ವೆಚ್ಚದಲ್ಲಿ ಈ ಸುಸಜ್ಜಿತ ಜೆಟ್ಟಿ ನಿರ್ಮಾಣಗೊಳ್ಳುತ್ತಿದೆ. ಈ ಜೆಟ್ಟಿಯಲ್ಲಿ ಒಳನಾಡಿನ ಸಾಂಪ್ರದಾಯಿಕ ಮೀನುಗಾರರಿಗೆ ಹಾಗೂ ಆಳಸಮುದ್ರ ಮೀನುಗಾರರಿಗೆ ಅವಕಾಶವಿದೆ. ಆದರೆ ಒಳಸಮುದ್ರ ಮೀನುಗಾರರಿಗೆ ಹಳೆ ಬಂದರು ಪ್ರದೇಶದಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ಒಳನಾಡು ಮೀನುಗಾರರಿಗೆ ಈ ಜೆಟ್ಟಿಯ ಬಳಕೆಗೆ ಅವಕಾಶ ನೀಡಲಾಗುವುದು. ಇಲ್ಲಿ ಸುಮಾರು 300 ಬೋಟ್‌ಗಳಿದ್ದು, 250 ಬೋಟ್‌ ತಂಗುವಂತೆ ವಿನ್ಯಾಸ ರೂಪಿಸಲಾಗಿದೆ. ಮೀನುಗಾರರಿಗೆ, ಮೀನುಗಾರಿಕೆಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಲಾಗುತ್ತದೆ ಎಂದರು.ಸಮುದ್ರಮುಖಿ ಬ್ರೇಕ್‌ವಾಟರ್‌ ಬೇಡಿಕೆ: ಇಲ್ಲಿ 264 ಮೀಟರ್‌ ಹಾಗೂ 831 ಮೀಟರ್‌ಗಳ ಎರಡು ಬ್ರೇಕ್‌ ವಾಟರ್‌ ನಿರ್ಮಿಸಲಾಗಿದೆ. ಇದು ಎಲ್‌ ಆಕಾರದಲ್ಲಿದ್ದು, ಇದನ್ನು ನೇರವಾಗಿ ಸಮುದ್ರಮುಖಿಯಾಗಿ ನಿರ್ಮಿಸುವಂತೆ ಮೀನುಗಾರರು ಬೇಡಿಕೆ ಇರಿಸಿದ್ದಾರೆ. ಅಲ್ಲದೆ ಇನ್ನೂ 500 ಮೀಟರ್‌ ವಿಸ್ತರಿಸುವಂತೆ ಕೋರಿದ್ದಾರೆ. ಈ ಎಲ್ಲ ಬೇಡಿಕೆಗಳನ್ನು ಬಂದರು ಇಲಾಖೆ, ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆ ನಾನು ಹಾಗೂ ಶಾಸಕರು ಮಾತುಕತೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂದರು. ಪಾಲಿಕೆ ಸ್ಥಳೀಯ ಸದಸ್ಯೆ ಸುಮಿತ್ರಾ, ಎನ್‌ಎಂಪಿಎ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಬಿ. ನಿಭವಾಂಕರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರವೀಣ್‌ ಶೆಣೈ ಮತ್ತಿತರರಿದ್ದರು.