ತಾಲೂಕಿನಲ್ಲಿ ಕನಕ ಭವನ, ಸಮುದಾಯ ಭವನ ನಿರ್ಮಾಣ

| Published : Dec 04 2024, 12:30 AM IST

ಸಾರಾಂಶ

ನಾಡಿನಲ್ಲಿ ತಮ್ಮ ಕೀರ್ತನೆಗಳ ಮೂಲಕ ಪ್ರಸಿದ್ಧರಾದ ಕನಕದಾಸರ ಹೆಸರಿನಲ್ಲಿ ತಾಲೂಕಿನಲ್ಲಿ ಕನಕ ಭವನ ಹಾಗೂ ಗುಳೇದಗುಡ್ಡ ಭಾಗದ ಹರದೊಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ನಾಡಿನಲ್ಲಿ ತಮ್ಮ ಕೀರ್ತನೆಗಳ ಮೂಲಕ ಪ್ರಸಿದ್ಧರಾದ ಕನಕದಾಸರ ಹೆಸರಿನಲ್ಲಿ ತಾಲೂಕಿನಲ್ಲಿ ಕನಕ ಭವನ ಹಾಗೂ ಗುಳೇದಗುಡ್ಡ ಭಾಗದ ಹರದೊಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭರವಸೆ ನೀಡಿದರು.

ಪಟ್ಟಣದ ಹರದೊಳ್ಳಿಯಲ್ಲಿ ಸೋಮವಾರ ತಾಲೂಕು ಮಟ್ಟದ ಹಾಲುಮತ ಸಮಾಜದ ಆಶ್ರಯದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸರು ಜಾತಿ ವ್ಯವಸ್ಥೆ ಹಾಗೂ ಮೂಢ ನಂಬಿಕೆಗಳನ್ನು ತೊಲಗಿಸಲು ಕೀರ್ತನೆ, ಮುಂಡಿಗೆ ಹಾಗೂ ಉದಯ ರಾಗಗಳನ್ನು ಬರೆದರು. ಅವುಗಳ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಸಮಾಜದಲ್ಲಿ ಮನುಷ್ಯರೆಲ್ಲ ಒಂದೇ ಎಂಬ ಭಾವವನ್ನು ಮೂಡಿಸಿದರು. ಹೀಗಾಗಿ ಕನಕದಾಸರನ್ನು ಸಮಾನತೆ ಪ್ರತಿಪಾದಿಸಿದವರಲ್ಲಿ ಪ್ರಮುಖರೆನಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣಕ್ಕೆ ತುಂಬಾ ಮಹತ್ವವಿದೆ. ಜೀವನದಲ್ಲಿ ಉನ್ನತ ಸ್ಥಾನಮಾನ, ಅಧಿಕಾರ, ಸಂಪತ್ತು ಗಳಿಸಲು ಶಿಕ್ಷಣವೇ ಪ್ರಮುಖವಾಗಿದೆ ಎಂದರು.

ತಹಸೀಲ್ದಾರ್‌ ಮಂಗಳಾ.ಎಂ, ಕೃಷಿ ಅಧಿಕಾರಿ ಆನಂದ ಗೌಡರ ಮಾತನಾಡಿ, ಕನಕದಾಸರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಿರೂರದ ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಾಯಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ನಾಗರಾಜ ಹೊಟ್ಟಿ ಕನಕದಾಸರ ಜೀವನ ಹಾಗೂ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು. ವೈದ್ಯಾಧಿಕಾರಿ ಡಾ.ನಾಗರಾಜ ಕುರಿ, ಪಿಎಸೈ ಸಿದ್ದಪ್ಪ ಯಡಹಳ್ಳಿ, ಬಾದಾಮಿ ತಾಪಂ ಇಒ ಸುರೇಶ ಕೋಕರ, ಉಪಪ್ರಾಚಾರ್ಯ ಎಂ.ಪಿ.ಮಾಗಿ ಇದ್ದರು.ಸಮಾಜದ ಮುಖಂಡರಾದ ಪುರಸಭೆ ಸದಸ್ಯ ಹನಮಂತ ಗೌಡರ, ಕೋಟೆಕಲ್ ಪಿಕೆಪಿಎಸ್ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ್, ಮುಖಂಡರಾದ ಮೂಕಪ್ಪ ಹುನ್ನೂರ, ನಿಂಗಪ್ಪ ವಾಲೀಕಾರ, ರಂಗನಾಥ ಮೊಕಾಶಿ, ಬಸವರಾಜ ಕಳ್ಳಿಗುಡ್ಡ, ಹನಮಂತ ಕಳ್ಳಗುಡ್ಡ, ಯಲಗುರ್ದಪ್ಪ ಗೌಡ್ರ, ರಮೇಶ ಬೂದಿಹಾಳ, ಜಗದೀಶ ಹಿರೇಗೌಡರ, ನೀಲಪ್ಪ ಗೌಡ್ರ ಸೇರಿದಂತೆ ಇನ್ನೂ ಅನೇಕರು ಇದ್ದರು.

ಮಕ್ಕಳನ್ನು ತಾತ್ಸಾರ ಭಾವನೆಯಿಂದ ಕಾಣದೇ ಪ್ರತಿಯೊಬ್ಬ ತಂದೆ, ತಾಯಿಗಳು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿರಿ. ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿ. ನಾನು ಪಡೆದ ಶಿಕ್ಷಣ ಹಾಗೂ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ತಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ. ಜಾತಿ, ಧರ್ಮ ಮೀರಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತೇನೆ.

-ಭೀಮಸೇನ ಚಿಮ್ಮನಕಟ್ಟಿ,
ಶಾಸಕ.