ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗೆ ಕನ್ನಡ ಭವನ ನಿರ್ಮಾಣ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Dec 25 2024, 12:46 AM IST

ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗೆ ಕನ್ನಡ ಭವನ ನಿರ್ಮಾಣ: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮ್ಮೇಳನಕ್ಕಾಗಿ ಸರ್ಕಾರ ನೀಡಿರುವ ಅನುದಾನ ಹಾಗೂ ದಾನಿಗಳಿಂದ ಬಂದ ಹಣವನ್ನು ಕ್ರೋಢೀಕರಿಸಿ ಖರ್ಚು ವೆಚ್ಚ ನಿಭಾಯಿಸಿದ್ದೇವೆ. ಎಷ್ಟು ಹಣ ಉಳಿದಿದೆ ಎಂಬುದನ್ನು ಲೆಕ್ಕ ಹಾಕಿ, ನಮ್ಮೆಲ್ಲಾ ಶಾಸಕರೂ ಒಟ್ಟಾಗಿ ಸೇರಿ ಕನ್ನಡ ಭವನ ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಕ್ಕರೆ ನಗರಿಯಲ್ಲಿ ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದ ಸವಿ ನೆನಪಿಗಾಗಿ ಕನ್ನಡ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೯೯೪ರಲ್ಲಿ ನಡೆದ ಸಮ್ಮೇಳನದಲ್ಲಿ ಒಂದಷ್ಟು ಹಣ ಉಳಿಸಿ ಪರಿಷತ್ ಭವನ, ಪ್ರತಿಮೆ ನಿರ್ಮಾಣ, ಕಲಾ ಮಂದಿರ, ಜಾನಪಪದ ಲೋಕಕ್ಕೆ ದೇಣಿಗೆ ನೀಡಲಾಗಿತ್ತು. ಮೂರನೇ ಸಮ್ಮೇಳನವೂ ಅದ್ದೂರಿಯಾಗಿ ನಡೆದಿದೆ. ಇದನ್ನು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಸುವ ಸಲುವಾಗಿ ಕನ್ನಡ ಭವನ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ ಎಂದರು.

ಸಮ್ಮೇಳನಕ್ಕಾಗಿ ಸರ್ಕಾರ ನೀಡಿರುವ ಅನುದಾನ ಹಾಗೂ ದಾನಿಗಳಿಂದ ಬಂದ ಹಣವನ್ನು ಕ್ರೋಢೀಕರಿಸಿ ಖರ್ಚು ವೆಚ್ಚ ನಿಭಾಯಿಸಿದ್ದೇವೆ. ಎಷ್ಟು ಹಣ ಉಳಿದಿದೆ ಎಂಬುದನ್ನು ಲೆಕ್ಕ ಹಾಕಿ, ನಮ್ಮೆಲ್ಲಾ ಶಾಸಕರೂ ಒಟ್ಟಾಗಿ ಸೇರಿ ಕನ್ನಡ ಭವನ ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಅದರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕರು, ಅಧಿಕಾರಿ ವರ್ಗದವರಿಂದ ಹಿಡಿದು ಎಲ್ಲರ ಹೊಂದಾಣಿಕೆ ಮತ್ತು ಸಹಿಷ್ಣುತಾ ಮನೋಭಾವದಿಂದ ಸಮ್ಮೇಳನ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಯಾವುದಕ್ಕೂ ಕೊರತೆಯಾಗದಂತೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರದಿಂದ ನೀಡಿದ್ದು ಇದು ನಮಗೆ ಮತ್ತಷ್ಟು ಬಲ ತಂದುಕೊಟ್ಟಿತ್ತು ಎಂದು ವಿವರಿಸಿದರು.

ಕಸಾಪ ರಾಜ್ಯಾಧ್ಯಕ್ಷರು, ಎಲ್ಲ ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಪೊಲೀಸ್ ಅಧೀಕ್ಷಕರು ಸೇರಿದಂತೆ ಜಿಲ್ಲೆ ಮತ್ತು ಉಪ ವಿಭಾಗ, ತಾಲೂಕು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳು ಮತ್ತು ಕಸಾಪ ಸಂಚಾಲಕರು ಪದಾಧಿಕಾರಿಗಳು, ಮೈಷುಗರ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳು, ಸಹ ನಮ್ಮ ಎಲ್ಲ ಕಾರ್ಯಗಳಿಗೆ ಬೆಂಬಲವಾಗಿ ನಿಂತರು. ಅವರಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸರ್ಕಾರಿ ನೌಕರರು ಒಂದು ದಿನದ ವೇತನ ನೀಡುವ ಮೂಲಕ ನಮ್ಮ ಜೊತೆಗೆ ಹೆಜ್ಜೆ ಹಾಕಿದರು ಎಂದರು.

ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ ಇತರರಿದ್ದರು.