ಹಳೆ ಸಂತೆ ಮೈದಾನದ ಜಾಗದಲ್ಲಿ ಒಕ್ಕಲಿಗರ ಭವನ ನಿರ್ಮಿಸಲು ಜಿಲ್ಲಾಧಿಕಾರಿಗಳ ಬಳಿ ದಾಖಲಾತಿಗಳಿವೆ. ಜಾಗಕ್ಕೆ ಸರ್ಕಾರಿ ಶುಲ್ಕ ಕಟ್ಟಬೇಕಿದೆ. ಶಾಸಕರ ನೇತೃತ್ವದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಂತರ ತಾಲೂಕು ಮಟ್ಟದಲ್ಲಿ ಒಕ್ಕಲಿಗ ಭವನ ನಿರ್ಮಾಣದ ಕಾರ್ಯಗಳು ಜರುಗಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ವೆಲ್ಲೆಸ್ಲಿ ಸೇತುವೆ ವೃತ್ತದಲ್ಲಿ ಕೆಂಪೇಗೌಡ ಜಯಂತಿ ನಂತರದಲ್ಲಿ ಕೆಂಪೇಗೌಡರ ಹೊಸ ಪ್ರತಿಮೆ ನಿರ್ಮಿಸಲು ಶ್ರಮಿಸುತ್ತೇನೆ ಎಂದು ತಾಲೂಕು ಒಕ್ಕಲಿಗ ಸಂಘದ ನೂತನ ಅಧ್ಯಕ್ಷ ಕೆ.ಜೆ.ರವಿಶಂಕರ್ ತಿಳಿಸಿದರು.

ನಿಕಟ ಪೂರ್ವ ಅಧ್ಯಕ್ಷ ಎಂ.ಎಲ್.ದಿನೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ಅವರು, ತಾಲೂಕಿನ ಒಕ್ಕಲಿಗರ ಸಂಘದ ಏಳಿಗೆ ಹಾಗೂ ಹೊಸ ಯೋಜನೆಗಳ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈಗಾಗಲೇ ಇರುವ ಸಂಘದ ನಿವೇಶನದಲ್ಲಿ ತ್ವರಿತವಾಗಿ ಸ್ವಂತ ಕಚೇರಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ನಾಡ ಪ್ರಭು ಕೆಂಪೇಗೌಡ ಪ್ರತಿಮೆ ಪ್ರತಿಸ್ಥಾಪಿಸಲು ಶ್ರಮ ವಹಿಸುತ್ತೇನೆ ಎಂದರು.

ಹಳೆ ಸಂತೆ ಮೈದಾನದ ಜಾಗದಲ್ಲಿ ಒಕ್ಕಲಿಗರ ಭವನ ನಿರ್ಮಿಸಲು ಜಿಲ್ಲಾಧಿಕಾರಿಗಳ ಬಳಿ ದಾಖಲಾತಿಗಳಿವೆ. ಜಾಗಕ್ಕೆ ಸರ್ಕಾರಿ ಶುಲ್ಕ ಕಟ್ಟಬೇಕಿದೆ. ಶಾಸಕರ ನೇತೃತ್ವದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಂತರ ತಾಲೂಕು ಮಟ್ಟದಲ್ಲಿ ಒಕ್ಕಲಿಗ ಭವನ ನಿರ್ಮಾಣದ ಕಾರ್ಯಗಳು ಜರುಗಲಿದೆ ಎಂದರು.

ಈ ವೇಳೆ ಸಂಘದ ನಿಕಟ ಪೂರ್ವ ಅಧ್ಯಕ್ಷ ಎಂ.ಎಲ್.ದಿನೇಶ್, ಕಾರ್ಯದರ್ಶಿ ಮರಳಗಾಲ ಗುರುಮೂರ್ತಿ, ನಿರ್ದೇಶಕರಾದ ಎಂ.ನಂದೀಶ್, ಟಿ.ಶ್ರೀಧರ್, ಪ್ರವೀಣ್, ಸೋಮಶೇಖರ್, ತಿಲಕ್, ಮರೀಗೌಡ, ಯೋಗಣ್ಣ, ಶಿವಸ್ವಾಮಿ, ಬಂಕ್ ಪ್ರಸನ್ನ, ತಡಗವಾಡಿ ಯತೀಶ್ ಪಾಲಹಳ್ಳಿ ಸುಕೇಶ್ ಸೇರಿದಂತೆ ಇತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಇಂದು ವಿದ್ಯುತ್ ವ್ಯತ್ಯಯ

ಶ್ರೀರಂಗಪಟ್ಟಣ: ಪಟ್ಟಣದ 66/11 ಕೆವಿ ವಿದ್ಯುತ್ ಉಪ-ವಿತರಣ ಕೇಂದ್ರಗಳ ತ್ರೈಮಾಸಿಕ ನಿರ್ವಾಹಣ ಕಾರ್ಯಕ್ಕಾಗಿ ಪಟ್ಟಣದ ಸೇರಿದಂತೆ ಇತರೆ ಗ್ರಾಮಗಲ್ಲಿ ಜೂ.11ರಂದು ವಿದ್ಯುತ್ ನಿಲುಗಡೆಯಾಗಲಿದೆ ಎಂದು ಸೆಸ್ಕ್ ಎಇಇ ಮಂಜುನಾಥ್‌ಪ್ರಸಾದ್ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಶ್ರೀರಂಗಪಟ್ಟಣ, ಗಂಜಾಂ, ಮಂಡ್ಯ ವಾಟರ್ ಸಪ್ಲೈ, ಪಾಂಡವಪುರ ವಾಟರ್ ಸಪ್ಲೈ, ನಗುವನಹಳ್ಳಿ, ಬೆಳವಾಡಿ, ಬೊಮ್ಮೂರು ಅಗ್ರಹಾರ, ಕಿರಂಗೂರು, ಕೆ.ಶೆಟ್ಟಹಳ್ಳಿ, ಶ್ರೀನಿವಾಸ ಅಗ್ರಹಾರ, ಚಂದಗಾಲು, ದರಸಗುಪ್ಪೆ ಹಾಗೂ ಚಂದಗಿರಿಕೊಪ್ಪಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ಜೂ.12ರಂದು ಗರುಡನ ಉಕ್ಕಡ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಾಹಣ ಕಾರ್ಯಕ್ಕಾಗಿ ಅಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ತಾಲೂಕಿನ ಸಬ್ಬನಕುಪ್ಪೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ಟಿ.ಎಂ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು, ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಇಂದು ಕನ್ನಡ ಆಂದೋಲನಕ್ಕೆ ಚಾಲನೆ

ಶ್ರೀರಂಗಪಟ್ಟಣ: ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಜೂ.11ರಂದು ಬೆಳಗ್ಗೆ 10.30 ಕ್ಕೆ ಕನ್ನಡ ಆಂದೋಲನಕ್ಕೆ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ್ ಹಸಿರು ನಿಶಾನೆ ತೋರಿ ಚಾಲನೆ ನೀಡಲಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.ಖಾಸಗಿ ಶಾಲೆ ಕಾಲೇಜುಗಳು, ಅಂಗಡಿ, ವಾಣಿಜ್ಯ ಮಳಿಗೆಗಳ ಮುಖ ಬೋರ್ಡ್‌ಗಳು ಸೇರಿದಂತೆ ಇತರೆಡೆಗಳಲ್ಲಿ ನಾಮಫಲಕಗಳಲ್ಲಿ ಮೊದಲು ಕನ್ನಡದಲ್ಲಿ ಬರೆದಿರುವಂತೆ ಒತ್ತಾಯಿಸಿ, ಕನ್ನಡ ಉಳಿವಿಗಾಗಿ ಆಯೋಜಿಸಿರುವ ಕನ್ನಡ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಖಾಸಗಿ ಶಾಲೆ, ಕಾಲೇಜುಗಳಿಗೆ ಭೇಟಿ ಕೊಟ್ಟು ಕನ್ನಡ ಉಳಿಸಿ, ಬೆಳೆಸಿ ಎಂದು ಜಾಗೃತಿ ಮೂಡಿಸಲಾಗುವುದು. ಜೊತೆಗೆ ಶಾಲಾ ವಾಹನಗಳ ಚಾಲಕರ ಪರವಾನಿಗೆ ಮತ್ತು ಇತರೆ ದಾಖಲಾತಿಗಳೊಂದಿಗೆ ಪ್ರತಿ ಶಾಲಾ ವಾಹನದಲ್ಲಿ ಮಕ್ಕಳನ್ನ ಕ್ಷೇಮವಾಗಿ ಕರೆದುಕೊಂಡು ಹೋಗಲು ಒಬ್ಬರು ಆಯಾ ಅವನ್ನ ಇರಿಸಿಕೊಂಡಿರುವುದು ಆಂದೋಲನದ ಮುಖ್ಯ ಉದ್ದೇಶವಾಗಿದೆ. ರೈತರ ಶಾಲೆ ಸಂಸ್ಥಾಪಕ ಗಂಜಾಂ ಸತ್ಯಮೂರ್ತಿ, ವೇದಿಕೆ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು,ಸಾರ್ವಜನಿಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ಧಾರೆ.