ಕಾಪುವಿನಲ್ಲಿ ಮಾರಿಯಮ್ಮ ದೇವಿ ಶಿಲಾ ದೇವಸ್ಥಾನ ನಿರ್ಮಾಣ: ವಾಸುದೇವ ಶೆಟ್ಟಿ

| Published : Oct 06 2024, 01:16 AM IST

ಕಾಪುವಿನಲ್ಲಿ ಮಾರಿಯಮ್ಮ ದೇವಿ ಶಿಲಾ ದೇವಸ್ಥಾನ ನಿರ್ಮಾಣ: ವಾಸುದೇವ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಳಶೋತ್ಸವ ಹಾಗೂ ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ದಾವಣಗೆರೆಯಲ್ಲಿ ಪೂರ್ವ ಭಾವಿ ಸಭೆಯಲ್ಲಿ ಮಹಿಳೆಯರು ಜ್ಯೋತಿ ಬೆಳಗಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಮಾರಿಯಮ್ಮ ದೇವಿಯು ನೆಲೆಸಿರುವ ಕಾಪು ಒಂದು ಪವಾಡ ಕ್ಷೇತ್ರವಾಗಿದೆ. ವಿಶ್ವದಾದ್ಯಂತ ದೇವಿ ಭಕ್ತರು ನೆಲೆಸಿದ್ದು, ಸರ್ಕಾರಿ ಧಾರ್ಮಿಕ ಇಲಾಖೆಯ ಎ ಗ್ರೇಡ್ ದೇವಾಲಯವನ್ನು ಭಕ್ತರ ಹಣದಿಂದ ನಿರ್ಮಿಸಲಾಗುತ್ತಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ತಿಳಿಸಿದರು.

ಅವರು ಇಲ್ಲಿನ ಭಂಟರ ಸಮುದಾಯ ಭವನದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮ ಕಳಶೋತ್ಸವ ಹಾಗೂ ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ಹಮ್ಮಿಕೊಂಡಿದ್ದ ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಮಿತಿ ರಚನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಶ್ರೀ ಮಾರಿಯಮ್ಮ ದೇವಾಲಯ ನಿರ್ಮಾಣವನ್ನು ₹99 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಸುಮಾರು ₹30 ಕೋಟಿ ವೆಚ್ಚದಲ್ಲಿ ಮಾರಿಯಮ್ಮನ ಗರ್ಭಗುಡಿಯನ್ನು ಕುಂಕುಮ ವರ್ಣದ ಶಿಲೆಯಿಂದ ನಿರ್ಮಿಸಲಾಗುತ್ತಿದೆ. ಶೇ.80 ರಷ್ಟು ಕೆಲಸ ನಡೆದಿದೆ. ರಜತ ಗದ್ದುಗೆಯಲ್ಲಿರುವ ಅಮ್ಮನನ್ನು ಸ್ವರ್ಣ ಗದ್ದುಗೆಯಲ್ಲಿ ಪ್ರತಿಷ್ಠಾಪಿಸುವ ಸಂಕಲ್ಪ ಮಾಡಿದ್ದು, ಇದಕ್ಕಾಗಿ ಕೇವಲ ಎರಡೂವರೆ ತಿಂಗಳಲ್ಲಿ 7.5 ಕೆಜಿ ಚಿನ್ನವನ್ನು ಭಕ್ತರು ನೀಡಿದ್ದಾರೆ. ಭಕ್ತರ ಮನವಿ ಮೇರೆಗೆ ಬಂಗಾರ ಸಮರ್ಪಿಸುವ ಅವಧಿಯನ್ನು ಅ.15 ರ ವರೆಗೆ ವಿಸ್ತರಿಸಲಾಗಿದೆ ಎಂದರು.

ಅ.29 ರಂದು ವಾಗೀಶ್ವರಿ ಪೂಜೆಯೊಂದಿಗೆ ಉಡುಪಿ ಪೇಜಾವರ ಸ್ವಾಮೀಜಿ ಹಾಗೂ ಎಂಟು ಜನರು ನವದುರ್ಗ ಲೇಖನ ಯಜ್ಞ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬರುವ 2025ರ ಮಾರ್ಚಿನಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮ ಕಳಶೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಸುರೇಶ ಶೆಟ್ಟಿ, ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್‌ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಲತಿಕಾ ದಿನೇಶ ಶೆಟ್ಟಿ, ಡಾ.ಶುಕ್ಲ ಶೆಟ್ಟಿ, ಅನಿತಾಬಾಯಿ, ಸಮಿತಿ ಕಾರ್ಯಾಧ್ಯಕ್ಷ ಉದಯಕುಮಾರ ಮುನಿಯಾಲು, ಯೋಗೀಶ ಶೆಟ್ಟಿ, ಕೆ.ವಿಶ್ವನಾಥ, ಸುವರ್ಧನ್, ಅರುಣ ಶೆಟ್ಟಿ, ರಘುರಾಮ ಶೆಟ್ಟಿ, ಬಂಟರ ಸಂಘದ ಉಮೇಶ ಶೆಟ್ಟಿ, ಬಿ.ಚಿದಾನಂದಪ್ಪ, ಬ್ರಾಹ್ಮಣ ಸಂಘದ ಅಧ್ಯಕ್ಷ ಶಶಿಕಾಂತ ಭಟ್, ಆನಂದಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಉಳುವಯ್ಯ ಇತರರು ಇದ್ದರು.