ಸಾರಾಂಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಗ್ರಾಪಂ, ಶಾಲೆ, ಅಂಗನವಾಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾದರಿ ಕೇಂದ್ರಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ದಿಲೀಷ್ ಶಶಿ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಇರುವ ಗ್ರಾಪಂ, ಶಾಲೆ ಅಂಗನವಾಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಗೆ ಈಗಾಗಲೇ ಸರ್ಕಾರದ ರೂಪಿಸಿರುವ ಎಲ್ಲ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿಕೊಂಡು ಮತ್ತು ಲಭ್ಯವಿರುವ ಸೌಕರ್ಯಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮಾದರಿ ಕೇಂದ್ರಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು.ಹೆಚ್ಚಿನ ಸೌಕರ್ಯಗಳು ಇಲ್ಲ ಹಾಗೂ ಸಿಬ್ಬಂದಿ ಕೊರತೆ ಇದೆ ಎನ್ನುವುದು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಬಾರದು. ಇರುವ ಸೌಲಭ್ಯಗಳನ್ನೆ ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು. ಸಾರ್ವಜನಿಕರ ಸೇವೆಗಳನ್ನು ಒದಗಿಸುವ ಬಗ್ಗೆ ಅಗತ್ಯವಿರುವ ದಾಖಲೆಗಳ ಕುರಿತು ಚೆಕ್ ಲಿಸ್ಟ್ ತಯಾರಿಸಿಕೊಂಡು ಅದರ ಪ್ರಕಾರ ಕಾರ್ಯನಿರ್ವಹಿಸಿ, ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣ ಸ್ಪಂದಿಸುವ ಗುಣವನ್ನು ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿ ರೂಢಿಸಿಕೊಂಡು, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರು ರೂಪಿಸಿರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಜತೆ ಪ್ರಮುಖ ಇಲಾಖೆಗಳಲ್ಲಿ ಮಾದರಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಜಿಲ್ಲೆಯಲ್ಲಿ ವಿನೂತನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ರೂಪಿಸುವ ಯೋಜನೆಯಿದೆ ಎಂದರು.ಜಿಪಂ ವತಿಯಿಂದ ಕೈಗೊಳ್ಳಲಾಗುತ್ತಿರುವ ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್, ನರೇಗಾ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳನ್ನು ಅತ್ಯಂತ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಜಿಪಂ ಉಪ ಕಾರ್ಯದರ್ಶಿ ಅಲ್ಲಾಬಕ್ಷ, ಪ್ರಕಾಶ ಹಾಲಮ್ಮನವರ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಯೋಜನಾ ನಿರ್ದೇಶಕ ಕರೀಂ ಅಸಾದಿ ಮತ್ತಿತರರು ಇದ್ದರು.ಸಿಬ್ಬಂದಿ ಕೊರತೆ ಇದ್ದರೂ ಎಲ್ಲ ಕೆಲಸ: ಗ್ರಾಪಂಗಳಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಇರುವ ಸಿಬ್ಬಂದಿಗಳ ಮೂಲಕ ಎಲ್ಲ ಕೆಲಸ ಮಾಡಲಾಗುತ್ತಿದೆ ಎಂದು ಜಿಪಂ ಸಿಇಒ ದಿಲೀಷ್ ಶಶಿ ತಿಳಿಸಿದ್ದಾರೆ. ನೇರ ನೇಮಕಾತಿ ಹಾಗೂ ಮುಂಬಡ್ತಿ ಕೋಟಾ ಸೇರಿ ಒಟ್ಟೂ 229 ಗ್ರಾಪಂ ಅಭಿವೃದ್ಧಿ ಅಧಿಕಾರಿ ಹುದ್ದೆ ಮಂಜೂರಾಗಿದೆ. ಇವುಗಳಲ್ಲಿ ಸದ್ಯ 38 ಹುದ್ದೆಗಳು ಖಾಲಿ ಇವೆ. ಗ್ರೇಡ್ 1 ಕಾರ್ಯದರ್ಶಿ 72 ಹುದ್ದೆಗಳು ಮಂಜೂರಾಗಿದೆ. ಸದ್ಯ 11 ಹುದ್ದೆಗಳು ಖಾಲಿ ಇವೆ. ಗ್ರೇಡ್ 2 ಕಾರ್ಯದರ್ಶಿ 157 ಹುದ್ದೆಗಳು ಮಂಜೂರಾಗಿದ್ದರೆ 44 ಹುದ್ದೆಗಳು ಖಾಲಿ ಇವೆ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ 87 ಹುದ್ದೆಗಳು ಮಂಜೂರಾಗಿದ್ದರೆ, 11 ಹುದ್ದೆಗಳು ಖಾಲಿ ಇವೆ.