ಜನವಸತಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಲ್ಲದು
KannadaprabhaNewsNetwork | Published : Oct 30 2023, 12:30 AM IST
ಜನವಸತಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಲ್ಲದು
ಸಾರಾಂಶ
ಸಿಡಿಪಿ ಮಾಸ್ಟರ್ ಪ್ಲಾನ್-2031ರಂತೆ ಹೊರವರ್ತುಲ ರಸ್ತೆ ಮಾರ್ಗವಾಗಿಯೇ ರಾ.ಹೆ. ನಿರ್ಮಿಸಲು ಒತ್ತಾಯ
ಶಿವಮೊಗ್ಗ: ಜನವಸತಿ ಪ್ರದೇಶದಲ್ಲಿ ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮಾಡುವ ಬದಲು ಶಿವಮೊಗ್ಗದ ಸಿಡಿಪಿ ಮಾಸ್ಟರ್ ಪ್ಲಾನ್-2031ರಲ್ಲಿ ಇರುವ ಹೊರವರ್ತುಲ ರಸ್ತೆ ಮಾರ್ಗವಾಗಿಯೇ ಹೆದ್ದಾರಿ ನಿರ್ಮಿಸಬೇಕು ಎಂದು ಸಾಮಾಜಿಕ ಹೋರಾಟಗಾರ ತೀ.ನ. ಶ್ರೀನಿವಾಸ್ ಒತ್ತಾಯಿಸಿದರು. ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ 210ರಿಂದ 215.36 ರವರೆಗಿನ 5.36 ಕಿಮೀ, ಉದ್ದದ ರಸ್ತೆಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಯ ಜನನಿಬಿಡ ಪ್ರದೇಶವಾದ ಹರಿಗೆ ಮತ್ತು ಎಂಆರ್‌ಎಸ್‍ಗಳ ಮೂಲಕ ಹಾದುಹೋಗುವಂತೆ ಅವೈಜ್ಞಾನಿಕವಾಗಿ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಇದು ಸರಿಯಲ್ಲ. ಯಾವುದೇ ರಾಷ್ಟ್ರೀಯ ಹೆದ್ದಾರಿಗಳೂ ಊರಿನ ಹೊರಗೆ ನಿರ್ಮಾಣ ಆಗಬೇಕೇ ಹೊರತು, ಊರ ಒಳಗೆ ನಿರ್ಮಾಣ ಆಗಬಾರದು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಆಗಿದ್ದ ಶಿವಕುಮಾರ್ ಹಾಗೂ ಯೋಜನಾ ನಿರ್ದೇಶಕರು ಈ ಹಿಂದೆಯೇ ಹೆದ್ದಾರಿ ಅಗಲೀಕರಣ ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಭಾಗದ ಜನನಿಬಿಡ ಪ್ರದೇಶಗಳಾದ ಹರಿಗೆ, ತೊಪ್ಪಿನಘಟ್ಟ, ಇಸ್ಲಾಪುರ ಮತ್ತು ಊರುಗಡೂರಿನಲ್ಲಿ ಹಾದುಹೋಗುವುದರಿಂದ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದರು. ಆದರೂ ಕೇಂದ್ರ ಸರ್ಕಾರ ನಗರದ ಒಳಗಡೆಯೇ ಹೆದ್ದಾರಿ ನಿರ್ಮಿಸಲು ಹೊರಟಿದೆ ಎಂದು ಆರೋಪಿಸಿದರು. ನಗರದ ಒಳಗಡೆ ಹೆದ್ದಾರಿ ಹಾದು ಹೋದರೆ ಹಿಂದುಳಿದ ವರ್ಗಗಳ ವಸತಿಗೃಹಗಳಿವೆ. ಶಿಕ್ಷಣ ಸಂಸ್ಥೆಗಳಿವೆ. ಕುವೆಂಪು ವಿ.ವಿ. ಆಡಳಿತ ಕಟ್ಟಡವಿದೆ. ದೇವರಾಜ್ ಅರಸು ಕಟ್ಟಡವಿದೆ. ವಸತಿ, ಅಂಗಡಿ ಕಟ್ಟಡಗಳಿವೆ. ಮುಖ್ಯವಾಗಿ ಕೆಪಿಟಿಸಿಎಲ್‍ನ ಮೈನ್ ರಿಸಿವಿಂಗ್ ಸ್ಟೇಷನ್ ಬೃಹತ್ ನೀರಿನ ಟ್ಯಾಂಕುಗಳಿವೆ. ಇವೆಲ್ಲವನ್ನೂ ನಾಶಪಡಿಸುವುದು ಕಷ್ಟವಾಗುತ್ತದೆ. ಅಧಿಕ ಖರ್ಚು ಕೂಡ ಹೆಚ್ಚಾಗುತ್ತದೆ. ಸುಮಾರು ₹200 ಕೋಟಿ ನಷ್ಟವಾಗುತ್ತದೆ. ಆದ್ದರಿಂದ ಈ ಅವೈಜ್ಞಾನಿಕ ಯೋಜನೆಯನ್ನು ಕೈ ಬಿಟ್ಟು ಸಿಡಿಪಿ ಮಾಸ್ಟರ್ ಪ್ಲ್ಯಾನ್‍ನಲ್ಲಿರುವ ಹೊರವರ್ತುಲ ರಸ್ತೆ ಬಳಸಿಕೊಂಡು ಕಾಮಗಾರಿ ಮುಂದುವರಿಸಬೇಕು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರವಣ್, ಜನಮೇಜಿರಾವ್, ಮನೋಹರ ಕುಮಾರ್, ರಘುನಾಥ್ ಮತ್ತಿತರರು ಇದ್ದರು.