ರಾಮಮಂದಿರ ನಿರ್ಮಾಣ ಕಾಂಗ್ರೆಸ್‌ಗೆ ಸಹಿಸಲಾಗ್ತಿಲ್ಲ: ಪ್ರಧಾನಿ ಮೋದಿ

| Published : Apr 29 2024, 01:41 AM IST / Updated: Apr 29 2024, 09:55 AM IST

ರಾಮಮಂದಿರ ನಿರ್ಮಾಣ ಕಾಂಗ್ರೆಸ್‌ಗೆ ಸಹಿಸಲಾಗ್ತಿಲ್ಲ: ಪ್ರಧಾನಿ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮಾರನೇ ದಿನವೇ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕಿತ್ತು.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಕಾಂಗ್ರೆಸ್‌ಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಹಿಸಲು ಸಾಧ್ಯವಾಗುತ್ತಿಲ್ಲ. ಆ ಪಕ್ಷ ಅಧಿಕಾರದಲ್ಲಿದ್ದಾಗ ಅದಕ್ಕೆ ಯತ್ನಿಸಲಿಲ್ಲ, ಬದಲಾಗಿ ರಾಮನ ಅಸ್ತಿತ್ವ ಪ್ರಶ್ನಿಸಿತು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದರೆ ದೇಶದಲ್ಲಿ ಬೆಂಕಿ ಬೀಳುತ್ತದೆ ಎಂದು ಗುಲ್ಲು ಹಬ್ಬಿಸಿದರು. ಆದರೆ, ಭವ್ಯ ದಿವ್ಯ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಿ ಪ್ರಾಣ ಪ್ರತಿಷ್ಠೆಯೂ ನಡೆಯಿತು. ಎಲ್ಲೂ ಬೆಂಕಿ ಬೀಳಲಿಲ್ಲ. ರಾಮಮಂದಿರ ನಿರ್ಮಾಣದಿಂದ ಅವರಿಗೆ ಮಿರ್ಚಿ (ಖಾರ) ಹತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಬಳ್ಳಾರಿ, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಮಾತನಾಡಿ ಈಗ ದೇಶ ಸುರಕ್ಷಿತವಾಗಿದ್ದು, ಭಯೋತ್ಪಾದಕತೆ, ದೇಶ ವಿರೋಧಿ ಕೃತ್ಯ ಕಡಿಮೆ ಆಗಿದೆ. ಭಾರತ ವಿರೋಧಿಗಳನ್ನು ಪಕ್ಕದ ದೇಶಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಎಚ್ಚರಿಸಿದರು.

1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮಾರನೇ ದಿನವೇ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕಿತ್ತು. ಆದರೆ, ಕಾಂಗ್ರೆಸ್‌ನವರು ರಾಮಲಲ್ಲಾ ವಿಷಯವನ್ನು ಕೋರ್ಟ್‌ಗೆ ಎಳೆದೊಯ್ದರು. ಆದರೆ, ನಾವು ಅಧಿಕಾರಕ್ಕೆ ಬಂದ ಬಳಿಕ ನಿಮ್ಮ ಇಷ್ಟಾರ್ಥದಂತೆ ರಾಮಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದೆವು ಎಂದರು.

ಆಮಂತ್ರಣ ತಿರಸ್ಕಾರ:

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್, ಅದರ ಮಿತ್ರ ಪಕ್ಷಗಳಿಗೆ ಆಹ್ವಾನ ನೀಡಿದರೆ ತಿರಸ್ಕರಿಸಿದರು. ಇಂತಹವರನ್ನು ತಿರಸ್ಕರಿಸುವ ಸಮಯ ಬಂದಿದೆ. ಪೂರ್ವಜರ ಇಷ್ಟಾರ್ಥದಂತೆ ರಾಮಮಂದಿರ ನಿರ್ಮಾಣವಾಗಿದ್ದು, ಈಗ ಎಲ್ಲರೂ ದರ್ಶನ ಮಾಡಬಹುದು ಎಂದರು.

ನುಗ್ಗಿ ಹೊಡೆಯುತ್ತೇವೆ:

2014ರ ಪೂರ್ವದಲ್ಲಿ ದೇಶದ ಬೆಂಗಳೂರು, ಅಯೋಧ್ಯೆ, ದಿಲ್ಲಿಯಲ್ಲೂ ಬಾಂಬ್‌ ಸ್ಫೋಟವಾಗುತ್ತಿತ್ತು. ಮದ್ದು, ಗುಂಡುಗಳ ಸದ್ದಾಗುತ್ತಿತ್ತು. ದೇಶದೊಳಗೆ ನುಸುಳಿ ಸೈನಿಕರ ಶಿರಚ್ಛೇದ ಮಾಡಲಾಗುತ್ತಿತ್ತು. ಈಗ ನಮ್ಮ ಸರ್ಕಾರ ಬಂದ ಬಳಿಕ ನಾವು ಅವರ ದೇಶದೊಳಗೆ ಹೋಗಿ, ಅವರ ಮನೆಗಳಿಗೆ ನುಗ್ಗಿ ಹೊಡೆಯುತ್ತೇವೆ. ಬಾಂಬ್‌ ಸ್ಫೋಟ, ಉಗ್ರಗಾಮಿ ಕೃತ್ಯದ ಸದ್ದಡಗಿದೆ ಎಂದರು.

ಪಿಎಫ್‌ಐ ಜೊತೆ ಒಪ್ಪಂದ:

ದೇಶದ ವಿರುದ್ಧ ಹುನ್ನಾರ ಮಾಡುತ್ತಿದ್ದ ಪಿಎಫ್‌ಐ ಅನ್ನು ನಾವು ನಿಷೇಧ ಮಾಡಿದರೆ, ಕಾಂಗ್ರೆಸ್‌ ಅದೇ ಸಂಘಟನೆ ಜೊತೆಗೆ ವೋಟ್‌ ಬ್ಯಾಂಕ್‌ಗಾಗಿ ಒಳಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಕೇರಳದ ವಯನಾಡಿನಲ್ಲಿ ರಾಹುಲ್‌ ಗಾಂಧಿ ಅವರ ಮತಗಳಿಗಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇಂತಹ ಸರ್ಕಾರ ಬೇಕಾ?:

ಕರ್ನಾಟಕದ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾದಾಗ ಸಿಲಿಂಡರ್‌ ಸ್ಫೋಟ ಎಂದು ರಾಜ್ಯದ ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡಿದರು. ಸಿಲಿಂಡರ್‌ ಅಲ್ಲ, ಇವರಿಗೆ ಬುದ್ಧಿಭ್ರಮಣೆ ಆಗಿತ್ತು. ವ್ಯವಹಾರಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಿಕೆ ನೀಡಿದರು. ಆದರೆ, ಯಾವಾಗ ಎನ್ಐಎಗೆ ಪ್ರಕರಣ ವರ್ಗಾವಣೆ ಆಯಿತೋ ಆಗ ನಾವು ಬಂಗಾಳದಲ್ಲಿ ಅಡಗಿದ್ದ ಉಗ್ರಗಾಮಿಗಳನ್ನು ಸೆರೆ ಹಿಡಿದು, ಹೆಡೆಮುರಿ ಕಟ್ಟಿದೆವು. ಹನುಮ ಜನ್ಮತಾಳಿದ ಪವಿತ್ರ ಸ್ಥಳದವರು ನೀವು? ಇಂತಹ ಕಾಂಗ್ರೆಸ್‌ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ನೇಹಾ ಎಂಬ ಮುಗ್ಧ ಹೆಣ್ಣು ಜೀವ ಏನೂ ಅಪರಾಧ ಮಾಡದಿದ್ದರೂ ಜೀವ ಕಳೆದುಕೊಂಡಿತು. ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಯಿತು. ಅವರ ತಂದೆ ಕಾಂಗ್ರೆಸ್ ಕಾರ್ಯಕರ್ತರು, ಅವರು ದುಖಃದಲ್ಲಿದ್ದರು. ಅವರ ಬೆಂಬಲಕ್ಕೆ ನಿಲ್ಲಬೇಕಾದ ಕಾಂಗ್ರೆಸ್‌ ಸರ್ಕಾರ, ನೋವು ಕೊಟ್ಟಿತು. ನೇಹಾಳಂತಹ ಹೆಣ್ಣು ಜೀವಗಳ ರಕ್ಷಣೆಗಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದರು.

ಮಧ್ಯವರ್ತಿಗಳಿಗೆ ಜಾಗ ಇಲ್ಲ:

ಮೋದಿ ಸರ್ಕಾರ ದಿಲ್ಲಿ ಗದ್ದುಗೆ ಹಿಡಿದ ಬಳಿಕ ಭ್ರಷ್ಟಾಚಾರ ನಡೆಸಲು ಮಧ್ಯವರ್ತಿಗಳಾಗಿದ್ದವರು ದಿಲ್ಲಿ ತೊರೆದಿದ್ದಾರೆ. ಈಗ ಕೆಲ ರಾಜ್ಯಗಳಲ್ಲಿ ಮಧ್ಯವರ್ತಿಗಳಾಗಲು ಹವಣಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಮಧ್ಯವರ್ತಿಗಳು ಪಲಾಯನ ಮಾಡಿದ್ದಾರೆ. ದಿಲ್ಲಿ ಹೋಟೆಲ್‌ಗಳು ಖಾಲಿಯಾಗಿವೆ. ಸ್ವಚ್ಛ ಅಭಿಯಾನ ಮೂಲಕ ದಲ್ಲಾಳಿಗಳನ್ನು ಗುಡಿಸಿದ್ದೇವೆ. ಅಭಿವೃದ್ಧಿಗೆ ಮೋದಿ ಸರ್ಕಾರ ಆದ್ಯತೆ ನೀಡಿದೆ. ಬೀದರ್‌, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆ ಅಭಿವೃದ್ಧಿಯಾಗಿದೆ. ರೈತರ ಹಿತ ಕಾಪಾಡಿದ್ದೇವೆ. ರಾಜ್ಯ ಸರ್ಕಾರ ರೈತರ ಹಿತ ಕಾಪಾಡದೇ ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯದ ಪಾಲು ₹4000ನ್ನು ಕಡಿತಗೊಳಿಸಿದೆ. ಕೇಂದ್ರ ಸರ್ಕಾರದ ₹6000 ರೈತರ ಖಾತೆಗೆ ಜಮೆಯಾಗುತ್ತಿದೆ ಎಂದರು.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಕೃಷ್ಣ ನಾಯಕ, ನೇಮರಾಜ್‌ ನಾಯ್ಕ, ಸಂಸದ ವೈ.ದೇವೇಂದ್ರಪ್ಪ, ಎಂಎಲ್ಸಿ ವೈ.ಎಂ. ಸತೀಶ್‌, ಹೇಮಲತಾ ನಾಯಕ, ಬಳ್ಳಾರಿ ಅಭ್ಯರ್ಥಿ ಬಿ.ಶ್ರೀರಾಮುಲು, ರಾಯಚೂರು ಅಭ್ಯರ್ಥಿ ಅಮರೇಶ್ವರ ನಾಯಕ, ಕೊಪ್ಪಳ ಅಭ್ಯರ್ಥಿ ಬಸವರಾಜ, ಮುಖಂಡರಾದ ಅಶ್ವತ್ಥನಾರಾಯಣಗೌಡ, ಸೋಮಶೇಖರ ರೆಡ್ಡಿ, ಅರುಣಾಲಕ್ಷ್ಮಿ, ಪಿ.ರಾಜೀವ್‌, ಚನ್ನಬಸವನಗೌಡ ಪಾಟೀಲ್‌, ಅನಿಲ್‌ ಲಾಡ್‌, ಅನಿಲ್‌ ನಾಯ್ಡು, ಸಿದ್ಧಾರ್ಥ ಸಿಂಗ್‌ ಇದ್ದರು.