ಸಾರಾಂಶ
ಸೈದಾಪುರ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ಅಯೋಧ್ಯೆ ಮಂತ್ರಾಕ್ಷತಾ ಕಳಶ ವಿತರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡುವುದು ನಮ್ಮ ಪೂರ್ವಜರ ಮತ್ತು ಕೋಟ್ಯಂತರ ಭಕ್ತರ ಶತಮಾನಗಳ ಕನಸು ನನಸಾಗಿದೆ ಎಂದು ಸಿದ್ದಾರೂಢ ಸಿದ್ದ ಚೇತನಾಶ್ರಮದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಹೇಳಿದರು.ಸೈದಾಪುರ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ಅಯೋಧ್ಯೆ ಮಂತ್ರಾಕ್ಷತಾ ಕಳಶ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮನಲ್ಲಿರುವ ಅತ್ಯುತ್ತಮ ಗುಣಗಳಿಂದಾಗಿ ಆತನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಅವರಲ್ಲಿದ್ದ ಗುಣ ನಾವು ಅಳವಡಿಸಿಕೊಂಡರೆ ಜೀವನ ಪಾವನವಾಗುವುದು ಎಂದು ಆಶೀರ್ವಚನ ನೀಡಿದರು.
ಮಂತ್ರಾಕ್ಷತಾ ಕಳಶ ವಿತರಣಾ ಅಭಿಯಾನದ ಜಿಲ್ಲಾ ಸಂಯೋಜಕ ಮಲ್ಲರೆಡ್ಡಿ ಪಾಟೀಲ್ ಮಾತನಾಡಿ, ಜ.1ರಿಂದ ಜ.15ರ ತನಕ ದೇಶದಾದ್ಯಂತ ಮನೆ ಮನೆಗೆ ಮಂತ್ರಾಕ್ಷತೆ, ಕರಪತ್ರ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ವಿವಿಧ ವಾದ್ಯಗಳ ಮೂಲಕ ವಿಶೇಷ ಶೋಭಯಾತ್ರೆ:
ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಪಟ್ಟಣದ ಮರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಸವೇಶ್ವರ ವೃತ್ತ, ಕನಕ, ಡಾ.ಜಗಜೀವನರಾಮ್, ಅಂಬಿಗರ ಚೌಡಯ್ಯ ವೃತ್ತದ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಮೂಲಕ ವಿಶ್ವನಾಥ ಮಂದಿರವರೆಗೆ ವಿವಿಧ ವಾದ್ಯಗಳ ಮೂಲಕ ಭಕ್ತಿ ಪೂರ್ವಕವಾಗಿ ಶೋಭಾಯಾತ್ರೆ ಕೈಗೊಳ್ಳಲಾಯಿತು. ಇಸ್ಕಾನ್ ತಂಡದ ವಾದ್ಯ ಮತ್ತು ಹಾಡುಗಳು ಯಾತ್ರೆಗೆ ವಿಶೇಷ ಮೆರಗು ನೀಡಿತ್ತು.ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಬನದೇಶ್ವರ ವಾರದ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಕಾರ್ಯವಾಹಕ ಸೂಗಪ್ಪ ಮಂದಲ್, ನಿತಿನ್ ತಿವಾರಿ, ಹೋಬಳಿ ಪ್ರಮುಖ ಚಂದ್ರಕಾಂತ ತಿಮೋಜಿಕರ್, ಗುರುಮಠಕಲ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಡಿವಾಳಕರ್, ಪ್ರೇಮನಾಥ ಕದಂಬ, ಕೆ.ಬಿ. ಗೋವರ್ಧನ, ಕೆಪಿ ವಸಂತಕುಮಾರ, ರಾಕೇಶ ಕೋರೆ, ಅಂಬರೀಶ ನಾಯಕ್, ರವಿ ಪಾಟೀಲ್ ಸೇರಿ ಇತರರಿದ್ದರು.