ಸಾರಾಂಶ
ಬೆಂಗಳೂರು : ಸೇನಾ ಸಿಬ್ಬಂದಿ, ನಿವೃತ್ತರು ಮತ್ತು ಅವರ ಕುಟುಂಬ ಸದಸ್ಯರಿಗೆಂದು ನಗರದಲ್ಲಿ ಪ್ರತ್ಯೇಕ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗುತ್ತಿದೆ.
ನಗರದ ಇಬ್ಬಲೂರಿನಲ್ಲಿ ಸೇನೆಗೆ ಸೇರಿದ ಜಾಗದಲ್ಲಿ ಹೊಸ ಚಿತಾಗಾರ ನಿರ್ಮಾಣಕ್ಕೆ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ರವಿ ಮುರುಗನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಚಿತಾಗಾರ ನಿರ್ಮಾಣ ಸ್ಥಳದಲ್ಲಿ ಹುತಾತ್ಮ ಯೋಧರ ಸ್ಮರಣಾರ್ಥ ಒಂದು ಕಲ್ಲಿನ ಶಿಲೆಯನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕ ಚಿತಾಗಾರಗಳ ಮೇಲಿನ ಒತ್ತಡ ಕಡಿಮೆ ಮಾಡುವ ಜೊತೆಗೆ ಸೇನಾ ಸಿಬ್ಬಂದಿ, ನಿವೃತ್ತರು ಮತ್ತು ಅವರ ಕುಟುಂಬದವರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ಮತ್ತು ಸೂಕ್ತ ರೀತಿಯಲ್ಲಿ ನಡೆಸುವ ಉದ್ದೇಶದಿಂದ ಈ ಚಿತಾಗಾರ ನಿರ್ಮಾಣ ಯೋಜನೆಯನ್ನು ರೂಪಿಸಲಾಗಿದೆ.
ಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ದೇಶ ಸೇವೆ ಮಾಡಿದವರಿಗೆ ಗೌರವಿಸುವುದು ಮತ್ತು ಸ್ಮರಿಸುವುದು ನಮ್ಮ ಕರ್ತವ್ಯ ಮತ್ತು ಬದ್ಧತೆಯಾಗಿದೆ ಎಂದು ಮೇಜರ್ ಜನರಲ್ ರವಿ ಮುರುಗನ್ ತಿಳಿಸಿದ್ದಾರೆ.