ಪುತ್ರನ ನೆನಪಲ್ಲಿ ಶಿವ ಧ್ಯಾನಮಂದಿರ ನಿರ್ಮಾಣ!

| Published : Feb 25 2025, 12:46 AM IST

ಸಾರಾಂಶ

ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ ದೇಶದಲ್ಲಿದ್ದ ನವೀನ ಗ್ಯಾನಗೌಡ್ರ ಹಸಿವು ಇಂಗಿಸಲು ಆಹಾರ ಪೊಟ್ಟಣ ತರಲೆಂದು ಬಂಕರ್‌ನಿಂದ ಹೊರಗೆ ತೆರಳಿದಾಗ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಬಲಿಯಾಗಿದ್ದ.

ರಾಣಿಬೆನ್ನೂರು: ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ಧ ಪ್ರಾರಂಭವಾದ ಸಮಯದಲ್ಲಿ 2022ರ ಮಾ. 1ರಂದು ನಿಧನರಾದ ಪುತ್ರ ನವೀನ ಗ್ಯಾನಗೌಡರ ನೆನಪಿನಲ್ಲಿ ತಾಲೂಕಿನ ಚಳಗೇರಿ ಗ್ರಾಮದ ನವೀನ ಪೋಷಕರು ಶಿವ ಧ್ಯಾನ ಮಂದಿರ ನಿರ್ಮಿಸಿದ್ದು, ಶಿವರಾತ್ರಿ ದಿನದಂದು ಲೋಕಾರ್ಪಣೆಗೊಳ್ಳಲಿದೆ. ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ ದೇಶದಲ್ಲಿದ್ದ ನವೀನ ಗ್ಯಾನಗೌಡ್ರ ಹಸಿವು ಇಂಗಿಸಲು ಆಹಾರ ಪೊಟ್ಟಣ ತರಲೆಂದು ಬಂಕರ್‌ನಿಂದ ಹೊರಗೆ ತೆರಳಿದಾಗ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಬಲಿಯಾಗಿದ್ದ. ಆ ದಿನ ಶಿವರಾತ್ರಿಯಾಗಿದ್ದರಿಂದ ಹಾಗೂ ನವೀನ್ ಪೋಷಕರು ಶಿವನ ಆರಾಧಕರಾಗಿರುವುದರಿಂದ ಮಗನ ಸ್ಮರಣೆಗಾಗಿ ಸಾರ್ವಜನಿಕರಿಗೂ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಶಿವ ಧ್ಯಾನಮಂದಿರ ನಿರ್ಮಿಸಿದ್ದಾರೆ.ಶಿವಧ್ಯಾನ ಮಂದಿರ ಲೋಕಾರ್ಪಣೆ ಅಂಗವಾಗಿ ಫೆ.25ರಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ. 25ರಂದು ಸಂಜೆ 6 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂತನ ಶಿವಲಿಂಗದ ಮೆರವಣಿಗೆ ಮೂಲಕ ಸಾಗಿ ನಂತರ ಶಿವ ಧ್ಯಾನ ಮಂದಿರ ತಲುಪಲಿದೆ.

ಫೆ. 26ರಂದು ಚನ್ನಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಶಿವಲಿಂಗಕ್ಕೆ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. ಫೆ. 27ರಂದು ನೂತನ ಶಿವಲಿಂಗಕ್ಕೆ ಬೆಳಗ್ಗೆ 5.30ಕ್ಕೆ ಖಂಡೇರಾಯನಹಳ್ಳಿ ಸಿದ್ಧಾರೂಢ ಆಶ್ರಮದ ನಾಗರಾಜನಂದ ಸ್ವಾಮಿಗಳಿಂದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ನಂತರ ಬೆಳಗ್ಗೆ 10.30ಕ್ಕೆ ಧರ್ಮಸಭೆ ಕಾರ್ಯಕ್ರಮ ಜರುಗಲಿದೆ.

ರಾಣಿಬೆನ್ನೂರು ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ರಾಣಿಬೆನ್ನೂರಿನ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಮಾಲತಿ ಅಕ್ಕ ಶಿವ ಧ್ವಜಾರೋಹಣ ಮತ್ತು ಪ್ರವಚನ ಕಾರ್ಯಕ್ರಮ ನೆರವೇರಿಸುವರು.

ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಮರೆಯೋಕೆ ಆಗೊಲ್ಲ: ನನ್ನ ಮಗ ನವೀನ ಉಕ್ರೇನ್ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವಾಗ ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯ ನಡೆದ ಯುದ್ಧದ ಸಮಯದಲ್ಲಿ ಉಕ್ರೇನ್ ದೇಶದ ಕಾರ್ಕಿವ್ ನಗರದ ಮೇಲೆ ರಷ್ಯಾ ದೇಶವು ನಡೆಸಿದ ಬಾಂಬ್ ದಾಳಿಗೆ ಶಿವರಾತ್ರಿ ದಿನವೇ ಬಲಿಯಾದ. ಈಗಲೂ ನನ್ನ ಮಗ ಅಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಭಾಸವಾಗುತ್ತಿದ್ದು, ಮರೆಯೋಕೆ ಆಗೊಲ್ಲ. ಅವನ ಸ್ಮರಣಾರ್ಥಕವಾಗಿ ಎಲ್ಲರಿಗೂ ಅನುಕೂಲವಾಗಲೆಂದು ಶಿವ ಧ್ಯಾನ ಮಂದಿರ ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದು ನವೀನ ತಂದೆ ಶೇಖರಪ್ಪ ಗ್ಯಾನಗೌಡರ ತಿಳಿಸಿದರು.