ಸಾರಾಂಶ
ಕಾರವಾರ: ಉತ್ತರ ಕನ್ನಡ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಮತ್ತು ಮಿತ್ರಸಮಾಜ ಟ್ರಸ್ಟ್ ವತಿಯಿಂದ ನಗರದ ಮಿತ್ರಸಮಾಜದಲ್ಲಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಟುವಟಿಕೆ ನಡೆಸುವ ಸದುದ್ದೇಶದಿಂದ ನೂತನವಾಗಿ ಸ್ಕೇಟಿಂಗ್ ಹಾಕಿ ರಿಂಕ್ ನಿರ್ಮಾಣ ಮಾಡಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜನ್ ಬಾನಾವಳಿಕರ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಪಂದ್ಯಾವಳಿ ನಡೆಸುವ ಯೋಚನೆಯನ್ನು ಉತ್ತರಕನ್ನಡ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಇಟ್ಟುಕೊಂಡಿದ್ದು, ೩ರಿಂದ ೬೦ ವರ್ಷ ವಯಸ್ಸಿನವರು ಸ್ಕೇಟಿಂಗ್ ಮಾಡಬಹುದಾಗಿದ್ದು, ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದರು.ಮಿತ್ರಸಮಾಜ ಸಂಸ್ಥೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಮಾತನಾಡಿ, ಈಗಾಗಲೇ ಕಾರವಾರ ಸುತ್ತಮುತ್ತಲಿನ ಮಕ್ಕಳು ಸ್ಕೇಟಿಂಗ್‌ಗಾಗಿ ಇದ್ದ ಸೌಕರ್ಯದಲ್ಲಿಯೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಪೂರಕ ವಾತಾವರಣ ನಿರ್ಮಾಣವಾಗಿದೆ.
ತಾವು ನಗರಸಭೆ ಅಧ್ಯಕ್ಷರಿದ್ದಾಗಲೇ ಸ್ಕೇಟಿಂಗ್ ರಿಂಕ್ ಮಾಡಲು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಾಗಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದ್ದು, ಮಿತ್ರಸಮಾಜದಲ್ಲಿ ಎಲ್ಲ ಸದಸ್ಯರ ಸಹಕಾರದಿಂದ ರಿಂಕ್ ನಿರ್ಮಾಣ ಮಾಡಲಾಗಿದೆ ಎಂಳಿದರು.ಕರ್ನಾಟಕ ತರಬೇತುದಾರ ದಿಲೀಪ್ ಹಣಬರ ಮಾತನಾಡಿ, ಆರ್‌ಎಸ್‌ಎಫ್‌ಐ ನಿಯಮದನ್ವಯ ೨೦x೪೦ ಮೀ. ಅಳತೆಯಲ್ಲಿ ಸ್ಕೇಟಿಂಗ್ ಹಾಕಿ ರಿಂಕ್ ನಿರ್ಮಾಣವಾಗಿದೆ. ಇದಕ್ಕಾಗಿ ₹೨೭ ಲಕ್ಷ ವೆಚ್ಚಾಗಿದ್ದು, ಮಿತ್ರಸಮಾಜದ ಸದಸ್ಯರ ಸಹಕಾರದಲ್ಲಿ ಉತ್ತರಕನ್ನಡ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್‌ನಿಂದ ವೆಚ್ಚ ಮಾಡಲಾಗಿದೆ. ಹಾಲಿ ಕರ್ನಾಟಕ ರೋಲರ್ ಹಾಕಿ ಮತ್ತು ಡರ್ಬಿ ತಂಡದ ಆಟಗಾರರ ಕ್ಯಾಂಪ್ ಇಲ್ಲಿಯೇ ನಡೆಯುತ್ತಿದೆ.ಭಾರತೀಯ ತಂಡದ ಇಬ್ಬರು ಆಟಗಾರರು ಕ್ಯಾಂಪಿನಲ್ಲಿದ್ದಾರೆ. ಇಲ್ಲಿ ಭಾಗವಹಿಸಿದ ಸ್ಕೇಟರ್ಸ್‌ಗಳು ಕೊಯಿಮುತ್ತೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಕಳೆದ ಏಳು ವರ್ಷಗಳ ಪ್ರಯತ್ನದ ಫಲವಾಗಿ ನಗರದ ಮಿತ್ರಸಮಾಜ ಸಂಸ್ಥೆ ಆವರಣದಲ್ಲಿ ಸುಸುಜ್ಜಿತ ಸ್ಕೇಟಿಂಗ್ ರಿಂಕ್ ಸಿದ್ಧವಾಗಿದೆ. ಈ ಹಿಂದೆ ಚಂಡಿಗಡ್, ಮೊಹಾಲಿ, ವಿಶಾಖಪಟ್ಟಣ, ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಮಕ್ಕಳ ಭಾಗವಹಿಸಿ ಸಾಧನೆ ಮಾಡಿದ್ದಾರೆ ಎಂದರು.ಅಸೋಸಿಯೇಷನ್ ಗೌರವಾಧ್ಯಕ್ಷ ಗಿರೀಶ್ ರಾವ್, ಸ್ಟಾರ್ ಚಾಯ್ಸ್ ಕಲಾ ಕೇಂದ್ರದ ಅಧ್ಯಕ್ಷ ರೋಹಿದಾಸ್ ಬಾನಾವಳಿ, ಮಿತ್ರಸಮಾಜದ ಉಪಾಧ್ಯಕ್ಷ ನಿತಿನ್ ಪಾವಸ್ಕರ, ಡಾ. ಹರೀಶ್, ಶ್ರೀಪಾದ ನಾಯ್ಕ, ತರಬೇತುದಾರರ ಸಚಿನ್ ದೇಸಾಯಿ, ಮಂಜಪ್ಪ ನಾಯ್ಕ, ಮಂಜುನಾಥ, ವಿಜಯಾನಂದ ನಾಯ್ಕ, ಅರುಣ್ ಬಾಡಕರ ಇದ್ದರು.