ಸಾರಾಂಶ
ಸಾರ್ವಜನಿಕರು ನಿವೇಶನ ಖರೀದಿಸುವ ಪೂರ್ವದಲ್ಲಿ ಪ್ರಾಧಿಕಾರದಿಂದ ಮಾಹಿತಿ ಪಡೆದು ಅಧಿಕೃತ ಬಡಾವಣೆಯಲ್ಲಿನ ನಿವೇಶನ ಮಾತ್ರ ಖರೀದಿಸಬೇಕೆಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಜನರಿಗೆ ಮನವಿ ಮಾಡಿದೆ.
ಹುಬ್ಬಳ್ಳಿ
ಇಲ್ಲಿಯ ಬಿಡ್ನಾಳ ಗ್ರಾಮ ವ್ಯಾಪ್ತಿಯಲ್ಲಿ 4 ಜಮೀನಿನಲ್ಲಿ ನಿರ್ಮಿಸಿದ್ದ ಅನಧಿಕೃತ ಬಡಾವಣೆಯನ್ನು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಬುಧವಾರ ತೆರವುಗೊಳಿಸಿತು.ಬಿಡ್ನಾಳ ಗ್ರಾಮದ ಸರ್ವೇ ನಂ.42/3 ಹಾಗೂ 42/4 ಕೃಷಿ ಜಮೀನನಲ್ಲಿ ಅನಧಿಕೃತ ಬಡಾವಣೆ ನಿರ್ಮಾಣದ ಕುರಿತು ಮಾಲೀಕರಿಗೆ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿತ್ತು. ಆದರೆ ಜಮೀನು ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಅನಧಿಕೃತ ಬಡಾವಣೆ ತೆರವುಗೊಳಿಸಲಾಗಿದೆ.
ಅದರಂತೆ ಇತರೆ ಪ್ರದೇಶದ ಕೃಷಿ ಜಮೀನನಲ್ಲಿ ತಲೆ ಎತ್ತಿರುವ ಬಡಾವಣೆಗಳಿಗೆ ನಿಯಮಾನುಸಾರ ನೋಟಿಸ್ ಜಾರಿಗೊಳಿಸಿ ತೆರವುಗೊಳಿಸಲು ಪ್ರಾಧಿಕಾರ ಕ್ರಮವಹಿಸಿದ್ದು, ಸಾರ್ವಜನಿಕರು ನಿವೇಶನ ಖರೀದಿಸುವ ಪೂರ್ವದಲ್ಲಿ ಪ್ರಾಧಿಕಾರದಿಂದ ಮಾಹಿತಿ ಪಡೆದು ಅಧಿಕೃತ ಬಡಾವಣೆಯಲ್ಲಿನ ನಿವೇಶನ ಮಾತ್ರ ಖರೀದಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.